ADVERTISEMENT

ಲಿಂಗಸುಗೂರು | ರಸ್ತೆ ಕಾಮಗಾರಿ ಬೇಗ ಪೂರ್ಣಗೊಳಿಸಿ: ಮಾನಪ್ಪ ವಜ್ಜಲ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 8:02 IST
Last Updated 26 ಜನವರಿ 2026, 8:02 IST
ಲಿಂಗಸುಗೂರಿನ ಗೌಳಿಪುರ ರಸ್ತೆ ಕಾಮಗಾರಿಯನ್ನು ಶಾಸಕ ಮಾನಪ್ಪ ವಜ್ಜಲ್ ಪರಿಶೀಲಿಸಿದರು
ಲಿಂಗಸುಗೂರಿನ ಗೌಳಿಪುರ ರಸ್ತೆ ಕಾಮಗಾರಿಯನ್ನು ಶಾಸಕ ಮಾನಪ್ಪ ವಜ್ಜಲ್ ಪರಿಶೀಲಿಸಿದರು   

ಲಿಂಗಸುಗೂರು: ಪಟ್ಟಣದ ಗೌಳಿಪುರ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವ ಕಾರಣ ಸ್ಥಳಕ್ಕೆ ಶಾಸಕ ಮಾನಪ್ಪ ವಜ್ಜಲ್ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

‘ಕರಡಕಲ್‌ನಿಂದ ಗೌಳಿಪುರ ಮಾರ್ಗದವರೆಗೂ ₹1 ಕೋಟಿ ಅನುದಾನದಲ್ಲಿ ಡಾಂಬಾರು ರಸ್ತೆ ನಿರ್ಮಾಣಕ್ಕೆ ರಸ್ತೆ ಅಗೆದು ಆರು ತಿಂಗಳು ಕಳೆದಿದೆ. ಆದರೂ ಕೆಆರ್‌ಐಡಿಎಲ್ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ದೂಳಿನಿಂದ ತೊಂದರೆ ಅನುಭವಿಸುವಂತಾಗಿದೆ. ಡಾಂಬಾರು ರಸ್ತೆ ಬದಲು ಸಿಸಿ ರಸ್ತೆ ನಿರ್ಮಿಸಿ’ ಎಂದು ನಿವಾಸಿ ನಾಗರಾಜ ಮಸ್ಕಿ ಒತ್ತಾಯಿಸಿದರು.

‘ಕಾಮಗಾರಿ ಬದಲಾಯಿಸಿದರೆ ತಾಂತ್ರಿಕ ಸಮಸ್ಯೆಗಳು ಎದುರಾಗಲಿವೆ. ರಸ್ತೆ ಕಾಮಗಾರಿಗೆ ಬಂದ ಅನುದಾನ ಬಳಕೆ ಮಾಡದಿದ್ದರೆ, ವಾಪಸ್ ಹೋಗುತ್ತದೆ. ಹೀಗಾಗಿ ಡಾಂಬರು ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಬೇಕು’ ಎಂದು ಶಾಸಕರು ನಿವಾಸಿಗಳ ಮನವೊಲಿಸಿದರು.

ADVERTISEMENT

‘ಕಾಮಗಾರಿ ವಿಳಂಬ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ. ಕೂಡಲೇ ಕಾಮಗಾರಿ ಆರಂಭಿಸಿ ಬೇಗ ಮುಗಿಸಬೇಕು’ ಎಂದು ಕೆಆರ್‌ಐಡಿಎಲ್ ಅಧಿಕಾರಿಗೆ ತಾಕೀತು ಮಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಕೆ.ನಾಗಭೂಷಣ, ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಭೀಮಣ್ಣ ಹಿರೇಮನಿ, ವೆಂಕನಗೌಡ ಐದನಾಳ ಹಾಗೂ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.