ಕವಿತಾಳ: ಸಮೀಪದ ಬಾಗಲವಾಡ ಗ್ರಾಮದಲ್ಲಿ ಚರಂಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು ಸುಗಮ ಸಂಚಾರಕ್ಕೆ ಪರದಾಡುವ ಪರಿಸ್ಥಿತಿ ಉಂಟಾಗಿದೆ.
ಆಗಾಗ ಸುರಿಯುತ್ತಿರುವ ಮಳೆಯಿಂದ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಈಚೆಗೆ ಸುರಿದ ಮಳೆಗೆ ರಸ್ತೆಯಲ್ಲಿ ನೀರು ನಿಂತು ಕೆಸರುಮಯವಾಗಿದ್ದು ಅಧಿಕ ಭಾರ ಸಾಗಿಸುತ್ತಿದ್ದ ಲಾರಿಯೊಂದು ಕೆಸರಲ್ಲಿ ಸಿಕ್ಕಿಕೊಂಡು ವಾಹನ ಸಂಚಾರಕ್ಕೆ ತಡೆ ಉಂಟಾಯಿತು. ಜೆಸಿಬಿ ಸಹಾಯದಿಂದ ಲಾರಿಯನ್ನು ಕೆಸರಿನಿಂದ ತೆಗೆಯಲಾಯಿತು.
‘ದುರಸ್ತಿ ಹಿನ್ನೆಲೆಯಲ್ಲಿ ರಸ್ತೆ ಅಗೆದು ಸದ್ಯ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ರಸ್ತೆಯಲ್ಲಿ ಮಣ್ಣು ಹರಡಿ ಮಳೆ ಬಂದರೆ ಕೆಸರುಮಯವಾಗುತ್ತಿದೆ. ಕಾಮಗಾರಿ ಚುರುಕುಗೊಳಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದರು.
‘ಕವಿತಾಳದಿಂದ ಮಾನ್ವಿ ಸಂಪರ್ಕಿಸುವ ಮುಖ್ಯ ರಸ್ತೆಯಾಗಿದ್ದು ಬಸ್, ಶಾಲಾ ವಾಹನ ಮತ್ತು ಅಧಿಕ ಭಾರ ಸಾಗಿಸುವ ಲಾರಿ ಸೇರಿದಂತೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯಲ್ಲಿ ನೀರು ನಿಂತ ಪರಿಣಾಮ ಬೈಕ್ ಸವಾರರು ಆಯ ತಪ್ಪಿ ಬೀಳುತ್ತಿದ್ದಾರೆ. ಕಾಮಗಾರಿ ಚುರುಕುಗೊಳಿಸುವಂತೆ ಮನವಿ ಮಾಡಿದರೂ ಲೊಕೋಪಯೋಗಿ ಇಲಾಖೆ ಎಂಜಿನಿಯರ್ ಗಮನಹರಿಸುತ್ತಿಲ್ಲ’ ಎಂದು ದಲಿತ ಸಂಘಟನೆ ಮುಖಂಡ ನಾಗರಾಜ ಹಿಂದಿನಮನಿ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.