ADVERTISEMENT

‘ಪಂಚ ಪರಿವರ್ತನ ಸಂಕಲ್ಪ ಅಭಿಯಾನ’

ಧರ್ಮ ಜಾಗರಣ ಮಂಚ್‌ನ ಪ್ರಾಂತ ಪ್ರಚಾರಕ ದತ್ತಾತ್ರೇಯ ನಾಯಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 5:54 IST
Last Updated 1 ಫೆಬ್ರುವರಿ 2026, 5:54 IST
ಲಿಂಗಸುಗೂರಿನ ದೊಡ್ಡ ಹನುಮಂತ ದೇವಸ್ಥಾನದ ಮುಂಭಾಗ ನಡೆದ ಹಿಂದೂ ಸಮಾವೇಶವನ್ನು ಧರ್ಮ ಜಾಗರಣ ಮಂಚ್‌ನ ಪ್ರಾಂತ ಪ್ರಚಾರಕ ದತ್ತಾತ್ರೇಯ ನಾಯಕ ಉದ್ಘಾಟಿಸಿದರು
ಲಿಂಗಸುಗೂರಿನ ದೊಡ್ಡ ಹನುಮಂತ ದೇವಸ್ಥಾನದ ಮುಂಭಾಗ ನಡೆದ ಹಿಂದೂ ಸಮಾವೇಶವನ್ನು ಧರ್ಮ ಜಾಗರಣ ಮಂಚ್‌ನ ಪ್ರಾಂತ ಪ್ರಚಾರಕ ದತ್ತಾತ್ರೇಯ ನಾಯಕ ಉದ್ಘಾಟಿಸಿದರು   

ಲಿಂಗಸುಗೂರು: ‘ಆರ್‌ಎಸ್‌ಎಸ್‌ಗೆ 100 ವರ್ಷ ತುಂಬಿದ ಪ್ರಯುಕ್ತ ಹಿಂದೂ ಸಮಾಜದ ಜಾಗೃತಿಗಾಗಿ ಪಂಚ ಪರಿವರ್ತನ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಧರ್ಮ ಜಾಗರಣ ಮಂಚ್‌ನ ಪ್ರಾಂತ ಪ್ರಚಾರಕ ದತ್ತಾತ್ರೇಯ ನಾಯಕ ತಿಳಿಸಿದರು.

ಪಟ್ಟಣದ ದೊಡ್ಡ ಹನುಮಂತ ದೇವಸ್ಥಾನದ ಮುಂಭಾಗದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಮಾತನಾ ಡಿದರು.

‘ಆರ್‌ಎಸ್‌ಎಸ್‌ ಶತಾಬ್ಧಿ ಪ್ರಯುಕ್ತ ಕುಟುಂಬ, ಪರಿಸರ, ಸಾಮಾಜಿಕ ಸಾಮರಸ್ಯ, ನಾಗರಿಕ ಜವಾಬ್ದಾರಿ ಮತ್ತು ಸ್ವದೇಶಿ ಎಂಬ ಪಂಚ ಪರಿವರ್ತನ ಸಂಕಲ್ಪ ಅಭಿಯಾನ ನಡೆಸಲಾಗುತ್ತಿದೆ. ಅವಿಭಕ್ತ ಕುಟಂಬಗಳು ಒಡೆದು ಚಿಕ್ಕ ಕುಟುಂಬಗಳಾಗುತ್ತಿರುವುದರಿಂದ ಮನೆ ಹಾಗೂ ಮನೆ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ’ ಎಂದರು.

ADVERTISEMENT

‘ಕುಟುಂಬಗಳನ್ನು ಒಗ್ಗೂಡಿಸಿ ಅವಿಭಕ್ತ ಕುಟುಂಬಗಳನ್ನಾಗಿ ಮಾಡಲು ಜಾಗೃತಿ, ‘ಮನೆಯೊಳಗೆ ಜಾತಿ ಇರಲಿ, ಮನೆಯಿಂದ ಹೊರ ಬಂದಾಗ ನಾವೆಲ್ಲರೂ ಹಿಂದೂ ಎನ್ನುವಂತಾಗಲಿ’ ಎಂದು ಸಾಮಾಜಿಕ ಸಾಮರಸ್ಯ ಮೂಡಿಸಲಾಗುವುದು, ಇತ್ತೀಚಿಗೆ ಅಕ್ಕಪಕ್ಕದ ರಾಷ್ಟ್ರಗಳು ದೇಶದಲ್ಲಿ ಡ್ರಗ್ಸ್, ಗಾಂಜಾದಂಥ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಹಿಂದೂ ಯುವಕರನ್ನು ದುಶ್ಚಟಗಳಿಗೆ ತಳ್ಳುವ ಹುನ್ನಾರ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಗೃತರಾಬೇಕಾಗಿದೆ. ಆಸೆ ಆಮಿಷವೊಡ್ಡಿ ಹಿಂದೂ ಧರ್ಮದವರನ್ನು ಮತಾಂತರ ಮಾಡುವ ಕುತಂತ್ರ ನಡೆದಿದೆ. ಇದರ ಬಗ್ಗೆ ಎಚ್ಚರ ವಹಿಸಬೇಕು’ ಎಂದು ಹೇಳಿದರು.

‘ಆಗಸ್ಟ್ 15ರಂದು ಅಧಿಕಾರ ಹಸ್ತಾಂತರವಾಯಿತೇ ಹೊರತು ನಿಜವಾದ ಸ್ವಾತಂತ್ರ್ಯ ದೊರೆತಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕವೂ ಹಿಂದೂಗಳ ರಕ್ಷಣೆ ಕುರಿತು ಗಮನ ಹರಿಸುತ್ತಿಲ್ಲ. ಸೌರಾಷ್ಟ್ರದ ಸೋಮನಾಥ ದೇವಸ್ಥಾನದ ಜೀರ್ಣೋದ್ಧಾರಕ್ಕೆ ವಿರೋಧ ವ್ಯಕ್ತಪಡಿಸಲಾಯಿತು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಲು 500 ವರ್ಷಗಳ ಕಾಲ ಹೋರಾಟ ಮಾಡಬೇಕಾಯಿತು. ಇಂದು ಶ್ರೀರಾಮ ಮಂದಿರ ನಿರ್ಮಾಣದ ಬಳಿಕ ಜಗತ್ತಿನಾದ್ಯಂತ ಹಿಂದೂಗಳು ಆರ್ಥಿಕ ಶಕ್ತಿಯಾಗಿ ಪರಿವರ್ತನೆಗೊಂಡಿದೆ’ ಎಂದರು.

ಸಿದ್ಧಲಿಂಗ ಸ್ವಾಮೀಜಿ ಸಮಾವೇಶದ ಸಾನ್ನಿಧ್ಯ ವಹಿಸಿದ್ದರು. ಮಹಾದೇವ ಸ್ವಾಮೀಜಿ, ನಂದಿಕೇಶ್ವರಿ ಮಾತಾ, ನಿವೃತ್ತ ಪ್ರಾಚಾರ್ಯ ಎಂ.ಎಸ್.ಪಾಟೀಲ, ಛಾವಣಿ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುಮಂತ ಕನಕಗಿರಿ ಹಾಗೂ ಶೋಭಾ ಕಾಟವಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.