ADVERTISEMENT

ಶಕ್ತಿನಗರ: ಆರ್‌ಟಿಪಿಎಸ್ ಆಸ್ಪತ್ರೆಯಲ್ಲಿ ಸೌಲಭ್ಯ ಕೊರತೆ

ಉಮಾಪತಿ ಬಿ.ರಾಮೋಜಿ
Published 9 ಏಪ್ರಿಲ್ 2020, 19:30 IST
Last Updated 9 ಏಪ್ರಿಲ್ 2020, 19:30 IST
ಶಕ್ತಿನಗರದ ಆರ್‌ಟಿಪಿಎಸ್‌ ಆಸ್ಪತ್ರೆ 
ಶಕ್ತಿನಗರದ ಆರ್‌ಟಿಪಿಎಸ್‌ ಆಸ್ಪತ್ರೆ    

ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ(ಆರ್‌ಟಿಪಿಎಸ್)ನೌಕರರ ಕುಟುಂಬದ ಅನುಕೂಲಕ್ಕಾಗಿ ತೆರೆಯಲಾಗಿರುವ ಕರ್ನಾಟಕ ವಿದ್ಯುತ್‌ ನಿಗಮದ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಹಲವು ಸೌಕರ್ಯಗಳ ಕೊರತೆಯ ಮಧ್ಯೆಯೂ ಕೊರೊನಾ ಸೋಂಕು ಪರೀಕ್ಷೆ ಹಾಗೂ ಚಿಕಿತ್ಸೆಗೆ ತಕ್ಕಮಟ್ಟಿಗೆಯ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ.

30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಇದಾಗಿದ್ದು, ವೆಂಟಿಲೇಟರ್‌ ಸೌಲಭ್ಯ ಇಲ್ಲ. ಹೀಗಾಗಿ ಕೊರೊನಾ ಶಂಕಿತ ಪ್ರಕರಣಗಳೇನಾದರೂ ಇಲ್ಲಿಗೆ ಬಂದರೆ, ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ರೋಗಿಗಳನ್ನು ರಾಯಚೂರು ನಗರದ ರಿಮ್ಸ್‌ ಆಸ್ಪತ್ರೆಗೆ ಕಳಹಿಸಬೇಕಾಗುತ್ತದೆ. ಆಕ್ಸಿಜನ್ ವ್ಯವಸ್ಥೆ ಆಸ್ಪತ್ರೆಯಲ್ಲಿದ್ದು , ಪ್ರತ್ಯೇಕವಾಗಿ ಕಫ್ ಸಮಾಲೋಚನಾ ಕೇಂದ್ರ ಇದೆ. ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ. 10 ಕಿಲೋಮೀಟರ್‌ ಅಂತರದ ಒಳಗೆ ಯಾವುದೇ ಸುಸಜ್ಜಿತ ಆಸ್ಪತ್ರೆ ಇಲ್ಲದ ಕಾರಣ ದೇವಸೂಗೂರು, ಯದ್ಲಾಪುರ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಕೂಡಾ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ.

ಉಪ ವಿಭಾಗಧಿಕಾರಿ ಸಂತೋಷ ಕಾಮಗೌಡ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಈಚೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಅಂಬೇಡ್ಕರ್ ಭವನದಲ್ಲಿ 150 ಮತ್ತು ಬಸವ ಕಲ್ಯಾಣ ಮಂಟಪದಲ್ಲಿ 70 ಹಾಸಿಗೆ ಸಾಮರ್ಥ್ಯದ ಕಟ್ಟಡಗಳನ್ನು ವಾರ್ಡ್‌ಗಳನ್ನಾಗಿ ಪೂರ್ವಸಿದ್ಧತೆ ಮಾಡಿಕೊಂಡಿದ್ದಾರೆ.

ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಆಸ್ಪತ್ರೆಯು ಸುಸಜ್ಜಿತ ಕಟ್ಟಡ ಹೊಂದಿದೆ. ಶಕ್ತಿನಗರದ ಆರ್‌ಟಿಪಿಎಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಅಧೀಕ್ಷಕರು, ಸ್ತ್ರೀ ರೋಗ ತಜ್ಞ ಸೇರಿ ಒಟ್ಟು 6 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಚಿಕ್ಕಮಕ್ಕಳ ತಜ್ಞರು, ಜನರಲ್ ಸರ್ಜನ್, ಕೀಲು ಮೂಳೆ ತಜ್ಞ, ಕಿವಿ,ಮೂಗು, ಗಂಟಲು ತಜ್ಞ, ಚರ್ಮರೋಗ ತಜ್ಞ ವೈದ್ಯರ ಕೊರತೆ ಇದೆ.

ಸ್ಥಾವರದಲ್ಲಿ ಕೆಲಸ ಮಾಡುವ ನೌಕರರ ಕುಟುಂಬಗಳ ಅನುಕೂಲಕ್ಕಾಗಿ ಈ ಆಸ್ಪತ್ರೆ ನಿರ್ಮಿಸಲಾಗಿದೆ. ಪ್ರತಿನಿತ್ಯ ನೂರಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ರೋಗಿಗಳ ಹೆಚ್ಚಿನ ಚಿಕಿತ್ಸೆಗೆ ರಾಯಚೂರಿನ ರಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯಲು ಎರಡು ಅಂಬುಲೆನ್ಸ್‌ ವ್ಯವಸ್ಥೆ ಇದೆ.

ಕೊರೊನಾ ಸೋಂಕು ಸೇರಿದಂತೆ ವಿವಿಧ ಕಾಯಿಲೆಗಳ ನಿವಾರಣೆಗೆ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದು ಸ್ಥಳೀಯರಾದ ಮಂಜುನಾಥ, ಸೂಗಪ್ಪ ಒತ್ತಾಯ.

ಕೊರೊನಾ ಭೀತಿ ಉಂಟಾಗಿ ಸ್ವಗ್ರಾಮಗಳಿಗೆ ಮರಳಿ ಬಂದಿರುವ ಜನರಿಗೆ, ದೇವಸೂಗೂರು ಗ್ರಾಮ ಪಂಚಾಯಿತಿ ಆಡಳಿತ ಮತ್ತು ಆರೋಗ್ಯ ಇಲಾಖೆ ವತಿಯಿಂದ ತಪಾಸಣೆ ಹಾಗೂ ವಿಶೇಷ ನಿಗಾ ವಹಿಸಲಾಗಿದೆ. ಆಂಧ್ರ ಮತ್ತು ತೆಲಂಗಾಣ ಗಡಿಭಾಗ ಶಕ್ತಿನಗರದ ಚೆಕ್‌ಪೋಸ್ಟ್‌ನಲ್ಲಿ ಆರೋಗ್ಯ ತಪಾಸಣಾ ಕೇಂದ್ರ ತೆರೆಯಲಾಗಿದೆ.

*
ಆಸ್ಪತ್ರೆಯಲ್ಲಿ ಇರುವ ಸೌಲಭ್ಯಗಳೊಂದಿಗೆ ಪ್ರಾಥಮಿಕ ಚಿಕಿತ್ಸೆಗಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ರಿಮ್ಸ್‌ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಲಾಗುವುದು.
–ಡಾ.ವಿಜಯಲಕ್ಷ್ಮೀ, ವೈದ್ಯಕೀಯ ಅಧೀಕ್ಷಕಿ, ಆರ್‌ಟಿಪಿಎಸ್ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT