ADVERTISEMENT

ಪೌರಕಾರ್ಮಿಕರೊಂದಿಗೆ ಸಂವಾದ; ಬದಲಾವಣೆಗಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಿ: ಪಿ.ರಘು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 5:09 IST
Last Updated 20 ಫೆಬ್ರುವರಿ 2026, 5:09 IST
ರಾಯಚೂರಿನ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಪೌರಕಾರ್ಮಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು ಮಾತನಾಡಿದರು. ಆಯೋಗದ ಕಾರ್ಯದರ್ಶಿ ಮಾಧುಸ್ವಾಮಿ, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಉಪಸ್ಥಿತರಿದ್ದರು
ರಾಯಚೂರಿನ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಪೌರಕಾರ್ಮಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು ಮಾತನಾಡಿದರು. ಆಯೋಗದ ಕಾರ್ಯದರ್ಶಿ ಮಾಧುಸ್ವಾಮಿ, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಉಪಸ್ಥಿತರಿದ್ದರು   

ರಾಯಚೂರು: ‘ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ನೈರ್ಮಲ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ. ಯಂತ್ರಚಾಲಿತ ಕಾರ್ಯಗಳಿಗೆ ಮಹತ್ವ ಬರಲಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಸಫಾಯಿ ಕರ್ಮಚಾರಿಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು‘ ಎಂದು ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಪೌರಕಾರ್ಮಿಕರೊಂದಿಗೆ ಸಂವಾದ ಕಾರ್ಯಕ್ರಮ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಫಾಯಿ ಕರ್ಮಚಾರಿಗಳ ಮಕ್ಕಳು ಮತ್ತೆ ಸಫಾಯಿ ಕರ್ಮಚಾರಿಗಳಾಗಬಾರದು. ಉತ್ತಮ ಶಿಕ್ಷಣ ಪಡೆದು ಇನ್ನೂ ಹೆಚ್ಚಿನ ಹುದ್ದೆಗಳಲ್ಲಿ ನೇಮಕಗೊಳ್ಳುವಂತೆ ಮಕ್ಕಳನ್ನು ಶಿಕ್ಷಣದ ಮೂಲಕ ಸಜ್ಜುಗೊಳಿಸಬೇಕು‘ ಎಂದು ಹೇಳಿದರು.

ADVERTISEMENT

‘ಆಯೋಗವು ಸಫಾಯಿ ಕರ್ಮಚಾರಿಗಳ ಹಾಗೂ ಪೌರ ಕಾರ್ಮಿಕರ ಸಮಸ್ಯೆಗಳು ಮತ್ತು ಅವರ ಕುಂದುಕೊರತೆಗಳನ್ನು ಸರ್ಕಾರಕ್ಕೆ ತಲುಪಿಸುವ ಹಾಗೂ ಪರಿಹರಿಸುವ ಉದ್ದೇಶವನ್ನು ಹೊಂದಿದೆ. ಪೌರಕಾರ್ಮಿಕರು ಸಮಾಜದಲ್ಲಿ ಎಲ್ಲರಂತೆ ಘನತೆಯಿಂದ ಬದುಕಬೇಕು ಎನ್ನುವುದೇ ನಮ್ಮ ಆಶಯವಾಗಿದೆ’ ಎಂದರು.

ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಸ್.ಮಾರೆಪ್ಪ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೇರ ಪಾವತಿಯಡಿ ಕಾರ್ಯನಿರ್ವಹಿಸುತ್ತಿದ್ದ, ಮೃತ ಹೊಂದಿದ ಪೌರಕಾರ್ಮಿಕರ ಮಾಹಿತಿಯನ್ನು ತಪ್ಪಾಗಿ ದಾಖಲಿಸಲಾಗಿದೆ. ಇದನ್ನು ಮರುಪರಿಶೀಲಿಸಬೇಕು. ಮೃತ ಪೌರಕಾರ್ಮಿಕರ ಕುಟುಂಬಕ್ಕೆ ಪರಿಹಾರ ಮತ್ತು ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಮನವಿ ಮಾಡಿದರು.

ದಲಿತ ಸಮರ ಸೇನೆಯ ರಾಜ್ಯ ವಿಭಾಗೀಯ ಸಂಚಾಲಕ ನೀಲಕಂಠ(ಅನಿಲ್) ಮಾತನಾಡಿ, ಸಪಾಯಿ ಕರ್ಮಚಾರಿಗಳಿಗೆ ಮೂಲಸೌಲಭ್ಯ ಮತ್ತು ಕಡ್ಡಾಯವಾಗಿ ಆಯಾ ಸ್ಥಳೀಯ ಸಂಸ್ಥೆಗಳಿಂದ ಗುರುತಿನ ಚೀಟಿ ಒದಗಿಸಬೇಕು. ಇದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಲಿದೆ’ ಎಂದರು.

ಆಯೋಗದ ಕಾರ್ಯದರ್ಶಿ ಮಾಧುಸ್ವಾಮಿ, ಜಿಲ್ಲಾಧಿಕಾರಿ ನಿತೀಶ್, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ, ನಗರಸಭೆ ಪರಾಯುಕ್ತ ಈರಣ್ಣ ಬಿರಾದಾರ, ಪಾಲಿಕೆ ಉಪ ಆಯುಕ್ತ ಸಂತೋಷಿರಾಣಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸಿಂಧೂ, ಪಾಲಿಕೆಯ ಅಧಿಕಾರಿ ಕೃಷ್ಣ ಶಾವಂತಗೇರಾ ಉಪಸ್ಥಿತರಿದ್ದರು.

ಪಂಚಾಯಿತಿಗಳಲ್ಲಿ ಕಿಟ್ ಕೊಡಿಸಿ: ಗ್ರಾಮ ಪಂಚಾಯಿತಿಗಳು ಸಫಾಯಿ ಕರ್ಮಚಾರಿಗಳಿಗೆ ಸುರಕ್ಷತಾ ಕಿಟ್‌ಗಳನ್ನು ಕೊಡುತ್ತಿಲ್ಲ. ಕೈಗವಸ ಇಲ್ಲದ ಕಾರಣ ಬರಿಗೈಯಲಿ ಕೆಲಸ ಮಾಡಬೇಕಾಗಿದೆ. ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಕೆಲ ಕರ್ಮಚಾರಿಗಳು ದೂರಿದರು.

ಸಕಾಲದಲ್ಲಿ ವೇತನ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಸಫಾಯಿ ಕರ್ಮಚಾರಿಗಳ ಮರುನೇಮಕಕ್ಕೆ ಆದೇಶ: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು ಅವರು ನಗರದ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತಾ ಕಾರ್ಯ ಹಾಗೂ ಕರ್ಮಚಾರಿಗಳ ಕೆಲಸದ ಸ್ಥಿತಿಯನ್ನು ಪರಿಶೀಲಿಸಿದರು.

ರಿಮ್ಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಾನಾ ವಿಷಯಗಳ ಬಗ್ಗೆ ಚರ್ಚಿಸಿದರು. ಸ್ಬಚ್ಛತಾ ಸಿಬ್ಬಂದಿಯಿಂದ‌ ಮಲ ಎತ್ತಿಸುವುದು ಅಮಾನವೀಯ ಕಾರ್ಯವಾಗುತ್ತದೆ. ಈ ಅನಿಷ್ಠ ಪದ್ದತಿ ತೊಲಗಬೇಕು ಎಂದು ಸೂಚಿಸಿದರು.

ಇತ್ತೀಚೆಗೆ ರಿಮ್ಸನಲ್ಲಿ ಸ್ವಚ್ಛತೆ ಕೆಲಸ ಮಾಡುವ ಸಿಬ್ಬಂದಿಯಿಂದ ಮಲ ಎತ್ತಿಸಿದ ಕುರಿತು ದಾಖಲೆ ಸಮೇತ ದೂರು ಬಂದಿದ್ದು, ಈ ಕೆಲಸ ಮಾಡಿಸಿದ ಸಂಬಂಧಪಟ್ಟ ಸೂಪರ್‌ವೈಸರಗಳಿಗೆ ಕೂಡಲೇ ನೋಟೀಸ್ ಜಾರಿ ಮಾಡಿ ಶಿಸ್ತುಕ್ರಮ ಜರುಗಿಸಬೇಕು ಎಂದು ರಿಮ್ಸ್ ನಿರ್ದೇಶಕರಿಗೆ ನಿರ್ದೇಶನ ನೀಡಿದರು.

ಈ ಘಟನೆಗೆ ಸಂಬಂಧಿಸಿದಂತೆ ಪ್ರಶ್ನಿಸಲು ಹೋದ 7 ಜನ ಸ್ವಚ್ಛತಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ ಕುರಿತು ಮಾಹಿತಿ ಬಂದಿದೆ. ಯಾವುದೇ ಕಾರಣಕ್ಕೂ ಕರ್ಮಚಾರಿಗಳ ಹೊಟ್ಟೆ ಮೇಲೆ ಹೊಡೆಯಬಾರದು. ಅಮಾನತುಗೊಳಿಸಿದ ಅಥವಾ ವರ್ಗಾವಣೆ ಮಾಡಿದ ಎಲ್ಲ ಸಫಾಯಿ ಕರ್ಮಚಾರಿಗಳನ್ನು ತಕ್ಷಣವೇ ಮರುನೇಮಕ ಮಾಡಿಕೊಳ್ಳಬೇಕು ಎಂದು ಆಸ್ಪತ್ರೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಹವಾಲು ಆಲಿಕೆ: ಸಫಾಯಿ ಕರ್ಮಚಾರಿಗಳ ಹಕ್ಕುಗಳನ್ನು ರಕ್ಷಿಸುವುದು ಆಯೋಗದ ಮೊದಲ ಆದ್ಯತೆಯಾಗಿದೆ. ಸಫಾಯಿ ಕರ್ಮಚಾರಿಗಳ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಆಯೋಗದ ಕಾರ್ಯದರ್ಶಿ ಮಾಧುಸ್ವಾಮಿ, ರಿಮ್ಸ್ ನಿರ್ದೇಶಕ ಡಾ.ರಮೇಶ, ಡಾ.ಎಂ.ಬಸವರಾಜ, ಪ್ರಮುಖರಾದ ಕಡಗೋಲ ಚೇತನ, ಪ್ರಸಾದ ಭಂಡಾರಿ ಹಾಜರಿದ್ದರು.

ರಾಯಚೂರಿನ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಪೌರಕಾರ್ಮಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು ಮಾತನಾಡಿದರು. ಆಯೋಗದ ಕಾರ್ಯದರ್ಶಿ ಮಾಧುಸ್ವಾಮಿ, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಉಪಸ್ಥಿತರಿದ್ದರು

ರಾಯಚೂರಿನ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪೌರಕಾರ್ಮಿಕರು

ವಾರದ ರಜೆ ಕೊಡಿಸಿ

‘ವಾರಕ್ಕೊಂದು ದಿನ ಸಂಪೂರ್ಣ ರಜೆ ಕೊಡಬೇಕು. ರಾಯಚೂರು ನಗರದಿಂದ ಬೇರೆ ತಾಲ್ಲೂಕುಗಳ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪೌರಕಾರ್ಮಿಕರು ವಾರಕ್ಕೊಂದು ದಿನ ರಜೆ ಸಿಕ್ಕರೆ ಮನೆಗೆ ಹೋಗಿ ಬರಲು ಅನುಕೂಲವಾಗಲಿದೆ ಎಂದು ಪೌರ ಕಾರ್ಮಿಕರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.