ADVERTISEMENT

ಭಂಗಿ ಜನರಿಗೆ ಸೂಕ್ತ ಸ್ಥಾನಮಾನಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 13:15 IST
Last Updated 21 ಜನವರಿ 2021, 13:15 IST
ರಾಯಚೂರಿನಲ್ಲಿ ರಾಷ್ಟ್ರೀಯ ಸಫಾಯಿ ಮಜ್ದೂರ್‌ ಕಾಂಗ್ರೆಸ್‌ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಗುರುವಾರ ಮನವಿ ಸಲ್ಲಿಸಿದರು
ರಾಯಚೂರಿನಲ್ಲಿ ರಾಷ್ಟ್ರೀಯ ಸಫಾಯಿ ಮಜ್ದೂರ್‌ ಕಾಂಗ್ರೆಸ್‌ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಗುರುವಾರ ಮನವಿ ಸಲ್ಲಿಸಿದರು   

ರಾಯಚೂರು: ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಮತ್ತು ಸಫಾಯಿ ಕರ್ಮಚಾರಿ ಆಯೋಗಕ್ಕೆ ಭಂಗಿ ಜನಾಂಗಕ್ಕೆ ಸೇರಿದವರನ್ನೇ ನೇಮಕ ಮಾಡುವುದು ಸೇರಿ ವಿವಿಧ ನೇಮಕಾತಿಗಳಲ್ಲಿ ಸೂಕ್ತ ಸ್ಥಾನಮಾನ ಒದಗಿಸಬೇಕು ಎಂದು ರಾಷ್ಟ್ರೀಯ ಸಫಾಯಿ ಮಜ್ದೂರ್‌ ಕಾಂಗ್ರೆಸ್‌ ಜಿಲ್ಲಾ ಘಟಕವು ಒತ್ತಾಯಿಸಿದೆ.

ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಗುರುವಾರ ಮನವಿ ಸಲ್ಲಿಸಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಂಗಿ ಜನಾಂಗಕ್ಕೆ ಸೇರಿದವರನ್ನೇ ವಿಧಾನ ಪರಿಷತ್‌ ಸ್ಥಾನಕ್ಕೆ ನಾಮನಿರ್ದೇಶನ ಮಾಡಬೇಕು. ದಿ.ಐ.ಪಿ.ಡಿ. ಸಾಲಪ್ಪ ಅವರ ವರದಿ ಸಮಿತಿಯನ್ನು ರಚಿಸಿ, ಈ ಸಮಿತಿಯಲ್ಲಿ ಭಂಗಿ ಸಮಯದಾಯದ ಸದಸ್ಯರನ್ನು ಸೇರ್ಪಡೆಗೊಳಿಸಬೇಕು ಎಂದು ಕೇಳಿಕೊಳ್ಳಲಾಗಿದೆ.

ರಾಜ್ಯದಲ್ಲಿರುವ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಭಂಗಿ ಜನಾಂಗದ ಒಬ್ಬರನ್ನು ನಾಮನಿರ್ದೇಶನ ಮಾಡುವ ಮೂಲಕ ರಾಜಕೀಯವಾಗಿ ಮೇಲೆತ್ತಬೇಕು. ದಕ್ಷಿಣ ಭಾಗದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿಯೇ ಮೊದಲು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗವನ್ನು ಮುಖ್ಯಮಂತ್ರಿ ಸ್ಥಾಪಿಸಿರುವುದು ಅಭಿನಂದನೀಯ. ಆದರೆ, ಆಯೋಗದ ಮೂಲಕ ಸಾಕಷ್ಟು ಅನ್ಯಾಯ ಆಗುತ್ತಿದೆ ಎಂದು ತಿಳಿಸಲಾಗಿದೆ.

ADVERTISEMENT

ಆಯೋಗದಲ್ಲಿ ಭಂಗಿ ಜನಾಂಗಕ್ಕೆ ಸ್ಥಾನಮಾನ ನೀಡದೆ ವಂಚಿಸಲಾಗುತ್ತಿದೆ. ಭಂಗಿ ಸಮುದಾಯ ಇವತ್ತಿಗೂ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ರಾಜಕೀಯವಾಗಿ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸಮಾಜದಲ್ಲಿ ಗೌರವಯುತ ಬದುಕು ಸಾಗಿಸಲು ಸಾಧ್ಯವಾಗುತ್ತಿಲ್ಲ. ಭಂಗಿ ಜನಾಂಗದ ಕುರಿತು ನೀಡಿರುವ ಸುಪ್ರೀಂಕೋರ್ಟ್‌ ಆದೇಶವು ವಾಸ್ತವದಲ್ಲಿ ಪಾಲನೆ ಆಗುತ್ತಿಲ್ಲ. ಮಲಹೊರುವ ಪದ್ಧತಿ ನಿಲ್ಲುತ್ತಿಲ್ಲ ಎಂದು ವಿವರಿಸಲಾಗಿದೆ.

ಭಂಗಿ ಜನರು ಗುಲಾಮರಂತೆ ಬದುಕುವ ಸ್ಥಿತಿ ಇದೆ. ಯೋಜನೆಗಳ ಮೂಲ ಉದ್ದೇಶ ಈಡೇರುತ್ತಿಲ್ಲ. ರಾಜಕೀಯ ನಾಯಕರು ಅವಕಾಶ ಕಲ್ಪಿಸದೆ. ಒಳಚರಂಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಬೇರೆ ವಿಭಾಗದ ಕೆಲಸಕ್ಕೆ ಬದಲಾಯಿಸುವಂತಿಲ್ಲ ಎನ್ನುವ ಆದೇಶ ಇದ್ದರೂ ಪಾಲನೆ ಆಗುತ್ತಿಲ್ಲ. ಅಧಿಕಾರಿಗಳು ದೌರ್ಜನ್ಯ ಪ್ರದರ್ಶಿಸುವುದರಿಂದ ಭಂಗಿ ಜನರು ನಿಸ್ಸಹಾಯಕರಾಗಿ ಕೆಲಸ ಮಾಡುವಂತಾಗಿದೆ ಎಂದು ತಿಳಿಸಿದರು.

ಬಾಸ್ಕರ್‌ಬಾಬು, ಪ್ರೇಮಜಿ ವಾಲ್ಮೀಕಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.