ADVERTISEMENT

ಸಾಮಾಜಿಕ ಕಾರ್ಯಕರ್ತ ಹನುಮಂತ ಭಂಗಿ ಮೇಲೆ ಹಲ್ಲೆ: ವಿಡಿಯೋ ವೈರಲ್‌

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 13:57 IST
Last Updated 8 ಜುಲೈ 2019, 13:57 IST
ಹನುಮಂತ ಭಂಗಿ
ಹನುಮಂತ ಭಂಗಿ   

ರಾಯಚೂರು: ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕು ಕೊಳ್ಳೂರ ಗ್ರಾಮದ ಸಾಮಾಜಿಕ ಕಾರ್ಯಕರ್ತ ಹನುಮಂತ ಭಂಗಿ ಅವರ ಮೇಲೆ ಮಾಜಿ ಸಂಸದ ಬಿ.ವಿ. ನಾಯಕ ಅವರ ಸೋದರಳಿಯ ಶ್ರೀನಿವಾಸ ನಾಯಕ ಅವರು ಹಲ್ಲೆ ಮಾಡಿದ ವಿಡಿಯೋ ವೈರಲ್‌ ಆಗಿದೆ.

ಖಾಸಗಿ ಹೊಟೇಲ್‌ ಕೋಣೆಯೊಂದರಲ್ಲಿ ಕೂಡಿಹಾಕಿದ್ದು, ತಮ್ಮ ತಂಟೆಗೆ ಬರದಂತೆ ಎಚ್ಚರಿಕೆ ನೀಡಿ ಕಪಾಳಕ್ಕೆ ಬಾರಿಸುವ ದೃಶ್ಯ ಅದರಲ್ಲಿದೆ. ಹಲ್ಲೆಗೊಳಗಾದ ಹನುಮಂತ ಭಂಗಿ ಅವರು ಸದ್ಯ ರಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್‌ ರಕ್ಷಣೆ ನೀಡಲಾಗಿದೆ.

ಮರಳು ದಂಧೆಕೋರರಾದ ಶ್ರೀನಿವಾಸ ನಾಯಕ, ಅಶೋಕ, ರವಿ ಸೇರಿದಂತೆ ಇತರೆ ನಾಲ್ಕು ಜನರು ಬಾಗೂರ ಗ್ರಾಮದಲ್ಲಿ ಜುಲೈ 5ರಂದು ರಾತ್ರಿಯಿಡೀ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಭಂಗಿ ಅವರು ಜಾಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ADVERTISEMENT

ದೂರು ಪಡೆದ ಪೊಲೀಸರು ಹನುಮಂತ ಅವರನ್ನು ಹಲ್ಲೆ ನಡೆದ ಸ್ಥಳಗಳಿಗೆ ಕರೆದೊಯ್ದು ಸ್ಥಳ ಮಹಜರು ಮಾಡಿಕೊಂಡಿದ್ದಾರೆ. ಮರಳು ದಂಧೆಕೋರರ ವಿರುದ್ಧ ದೂರು ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಅಕ್ರಮ ಮರಳು ದಂಧೆ ವಿರುದ್ಧ ಬೆಂಗಳೂರಿನ ಹೈಕೋರ್ಟ್‌ನಲ್ಲಿ ಹನುಮಂತ ಭಂಗಿ ಅವರು ಕೆಲವು ತಿಂಗಳುಗಳ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಾಪಸ್‌ ಪಡೆಯುವಂತೆ ಹನುಮಂತಪ್ಪ ಮೇಲೆ ಮರಳು ದಂಧೆಕೋರರು ಒತ್ತಡ ಹಾಕಿ, ಹಲ್ಲೆ ಮಾಡಿದ್ದಾರೆ.

ಹಲ್ಲೆ ನಡೆಸಿದ ದಿನದಂದು ಐದು ಲಕ್ಷ ಹಣವನ್ನು ಹನುಮಂತಪ್ಪಗೆ ನೀಡಿದ ಆರೋಪಿಗಳು, ಈ ಹಣವನ್ನು ಪಡೆದುಕೊಳ್ಳುವಂತೆ ಹೇಳಿ ಅದರ ದೃಶ್ಯವನ್ನು ಆರೋಪಿಗಳು ವಿಡಿಯೋ ಮಾಡಿಕೊಂಡಿದ್ದಾರೆ. ಮತ್ತೆ ಹಣವನ್ನು ಕಿತ್ತುಕೊಂಡು ಕೆಲವು ಕಾಗದಗಳ ಮೇಲೆ ಸಹಿ ಪಡೆದುಕೊಂಡಿದ್ದಾರೆ ಎಂದು ಠಾಣೆಗೆ ನೀಡಿರುವ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.