ADVERTISEMENT

ಭ್ರಷ್ಟಾಚಾರ ತಡೆಗೆ ಚೈನಾ ಮಾದರಿ ಶಿಕ್ಷೆ ಅಗತ್ಯ: ಸಂತೋಷ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2024, 10:27 IST
Last Updated 27 ನವೆಂಬರ್ 2024, 10:27 IST
   

ಲಿಂಗಸುಗೂರು(ರಾಯಚೂರು ಜಿಲ್ಲೆ):‘ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಚೀನಾ ಮಾದರಿ ಶಿಕ್ಷೆಯ ಪದ್ಧತಿ ಬೇಕಿದೆ. ಅಂದಾಗ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ’ ಎಂದು ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಾಮೂರ್ತಿ ಎನ್.ಸಂತೋಷ ಹೆಗ್ಡೆ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭ್ರಷ್ಟಾಚಾರ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದೆ. ಈಗಿರುವ ವಿಚಾರಣೆ, ಶಿಕ್ಷೆಗೆ ಬೆಲೆಯೇ ಇಲ್ಲದಂತಾಗಿದೆ. ಗಲ್ಲು ಶಿಕ್ಷೆಯಂಥ ಶಿಕ್ಷೆ ಮಾನದಂಡ ಆದಲ್ಲಿ ಭ್ರಷ್ಟಾಚಾರ ತಡೆಯಲು ಸಾಧ್ಯವಾಗಬಹುದು’ ಎಂದರು.

‘ರಾಷ್ಟ್ರಪಿತ ಮಹಾತ್ಮ ಗಾಂಧಿ ಜೈಲಿಗೆ ಹೋಗಿ ಬಂದಿದ್ದಾರೆ. ನಾವು ಹೋಗಿ ಬರುವಲ್ಲಿ ತಪ್ಪೇನಿದೆ ಎಂಬ ಅಹಂಭಾವ ರಾಜಕಾರಣದಲ್ಲಿ ಮನೆ ಮಾಡಿದೆ. ನೈತಿಕ‌ ಮೌಲ್ಯಗಳು ಕುಸಿತಗೊಂಡಿವೆ. ಜೈಲಿನಿಂದ ಬಿಡುಗಡೆಯಾಗಿ ಬರುವವರ ಭವ್ಯ ಮೆರವಣಿಗೆ ಮಾಡುತ್ತಿರುವುದು ನೋವಿನ ಸಂಗತಿ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಆಸೆ, ಆಕಾಂಕ್ಷೆಗಳು ಬೇಕು. ಆದರೆ, ವಿಕೃತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ರಾಜ್ಯದಲ್ಲಿ ಮುಡಾ ಹಗರಣದಲ್ಲಿ ಹೈಕೋರ್ಟ್ ನಿರ್ದೇಶನ ನೀಡಿದೆ. ಅದಾಗ್ಯೂ ಮೊಂಡುತನ ಪ್ರದರ್ಶನ ನೋಡುತ್ತಿದ್ದೇವೆ. ಭ್ರಷ್ಟಾಚಾರದ ಹಣದಿಂದ ಶ್ರೀಮಂತ ಆಗಬಹುದು. ನೆಮ್ಮದಿ ಬದುಕು ಕಟ್ಟಿಕೊಳ್ಳಲಾಗದು’ ಎಂದರು.

‘ತಾವು ಈಗಾಗಲೇ 1,848 ಕಾಲೇಜುಗಳಿಗೆ ಭೇಟಿ ನೀಡಿ ಯುವಕರಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಬಗೆಗೆ ಜಾಗೃತಿ ಮೂಡಿಸಿರುವೆ. ಸಾಮಾಜಿಕ ಬದಲಾವಣೆ ಆಗಬಹುದು. ಆದರೆ, ಕ್ರಾಂತಿಕಾರಿ ಬದಲಾವಣೆ ಆದಲ್ಲಿ ದೇಶ ಛಿದ್ರಗೊಳ್ಳುವ ಸಾಧ್ಯತೆಗಳಿವೆ. ಭಾವನೆಗಳ ಬದಲಾವಣೆಗೆ ಪ್ರಯತ್ನ ನಡೆಸಿರುವೆ. ಫಲಾಪೇಕ್ಷೆ ಜನರಿಗೆ ಬಿಟ್ಟಿದ್ದು’ ಎಂದು ತಿಳಿಸಿದರು.

ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಮಂಜುಳಾ ಶಿವಪ್ಪ ಉಂಡಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಅಂಬಣ್ಣ ಕೆ., ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.