ರಾಯಚೂರು: ತೆಲಂಗಾಣದ ಪ್ರಸಿದ್ಧ ಸಿಎಂಆರ್ ಶಾಪಿಂಗ್ ಮಾಲ್ ನಗರದ ಮಹಾತ್ಮ ಗಾಂಧಿ ಚೌಕ್ ಸಮೀಪದ ಬಹುಮಹಡಿ ಕಟ್ಟಡದಲ್ಲಿ ಸೋಮವಾರ ಆರಂಭವಾಯಿತು.
ಚಿತ್ರನಟಿ ಸಪ್ತಮಿ ಗೌಡ ಅವರು ಮಾಲ್ ಉದ್ಘಾಟಿಸಿದರು. ಬೆಂಗಳೂರಿನಿಂದ ರಾಯಚೂರಿಗೆ ಬಂದಿದ್ದ ‘ಕಾಂತಾರ’ ನಾಯಕಿ ಸಪ್ತಮಿಗೌಡ ಅವರನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ಯುವಕರು ಸೇರಿದ್ದರು.
ಅಭಿಮಾನಿಗಳು ತಮ್ಮ ನೆಚ್ಚಿನ ಚಲನಚಿತ್ರ ತಾರೆಯನ್ನು ನೋಡಲು ಅನುಕೂಲವಾಗುವಂತೆ ಮಾಲ್ ಆವರಣದಲ್ಲೇ ಚಿಕ್ಕ ವೇದಿಕೆ ನಿರ್ಮಿಸಲಾಗಿತ್ತು.
ಸಪ್ತಮಿ ಗೌಡ ಅವರು ವೇದಿಕೆಯತ್ತ ಬರುತ್ತಲೇ ಅಭಿಮಾನಿಗಳು ಜೋರಾಗಿ ಶಿಳ್ಳೆ ಹೊಡೆದು, ಕೂಗು ಹಾಕಿ ಅವರತ್ತ ಕೈಬೀಸಿ ಕೂಗಿ ಸಂಭ್ರಮಿಸಿದರು.
ನಟಿ ಸಪ್ತಮಿ ಗೌಡ ಮಾತನಾಡಿ, ‘ಮಾಲ್‌ನಲ್ಲಿ ಚಿಕ್ಕ ಮಕ್ಕಳಿಂದ ದೊಡ್ಡವರಿಗೂ ಕಡಿಮೆ ದರದಲ್ಲಿ ಬಟ್ಟೆಗಳು ಲಭ್ಯ ಇವೆ. ರಾಯಚೂರಿನ ಗ್ರಾಹಕರು ಇದರ ಪೂರ್ಣ ಲಾಭ ಪಡೆಯಬೇಕು’ ಎಂದು ಹೇಳಿದರು.
‘ಕಾಂತಾರ ಅಧ್ಯಾಯ–1 ಟ್ರೇಲರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಪ್ರೇಕ್ಷಕರು ಕಾಂತಾರಕ್ಕೆ ನೀಡಿದ ಬೆಂಬಲವನ್ನು ಇದಕ್ಕೂ ಕೊಡಬೇಕು. ಶೀಘ್ರದಲ್ಲೇ ಇನ್ನೂ ಎರಡು ಚಿತ್ರಗಳು ಬರಲಿವೆ’ ಎಂದು ತಿಳಿಸಿದರು.
‘ಕಾಂತಾರ ಸಿನಿಮಾ ಬೇರೆ ಬೇರೆ ಭಾಷೆಯಲ್ಲಿ ಡಬ್ ಆಗಿದೆ. ಕನ್ನಡದಲ್ಲೇ ಸಿನಿಮಾ ಮಾಡಲು ಹೆಚ್ಚು ಖುಷಿ. ಕನ್ನಡದಲ್ಲಿ ಉತ್ತಮ ಕಥೆಗಳು ಬಂದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡುತ್ತೇನೆ’ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಸಿಎಂಆರ್ ಶಾಪಿಂಗ್ ಮಾಲ್ ವ್ಯವಸ್ಥಾಪಕ ಲಿಂಗಮೂರ್ತಿ ಮಾತನಾಡಿ, ‘ಆಂಧ್ರಪ್ರದೇಶ 27, ತೆಲಂಗಾಣದಲ್ಲಿ 13 ಹಾಗೂ ಒಡಿಶಾದಲ್ಲಿ ಒಂದು ಮಾಲ್ ಇದೆ. ಕರ್ನಾಟಕದಲ್ಲಿ 42ನೇ ಮಾಲ್ ರಾಯಚೂರಿನಲ್ಲಿ ಆರಂಭವಾಗಿದೆ. ಇನ್ನು ಪ್ರತಿ ರಾಜ್ಯದಲ್ಲೂ ಮಾಲ್ ಆರಂಭಿಸುತ್ತೇವೆ’ ಎಂದು ತಿಳಿಸಿದರು.
ಗ್ರಾಮೀಣ ಶಾಸಕ ದದ್ದಲ್ ಬಸನಗೌಡ, ನಗರ ಶಾಸಕ ಡಾ.ಶಿವರಾಜ ಪಾಟೀಲ, ರಾಯಚೂರು ಮಹಾನಗರ ಪಾಲಿಕೆ ಮೇಯರ್ ನರಸಮ್ಮ ಮಾಡಗಿರಿ, ಕೃಷಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಚನ್ನಬಸವ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.