ADVERTISEMENT

ಶಾಲೆಗಳಿಗೆ ತಳಿರು, ತೋರಣದ ಸಿಂಗಾರ

​ಪ್ರಜಾವಾಣಿ ವಾರ್ತೆ
Published 17 ಮೇ 2022, 4:24 IST
Last Updated 17 ಮೇ 2022, 4:24 IST
ಲಿಂಗಸುಗೂರು ತಾಲ್ಲೂಕಿನ ಬೆಂಡೋಣಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಾಲಾ ಆರಂಭೋತ್ಸವ ಪ್ರಯುಕ್ತ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಲಾಯಿತು
ಲಿಂಗಸುಗೂರು ತಾಲ್ಲೂಕಿನ ಬೆಂಡೋಣಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಾಲಾ ಆರಂಭೋತ್ಸವ ಪ್ರಯುಕ್ತ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಲಾಯಿತು   

ಲಿಂಗಸುಗೂರು: ತಾಲ್ಲೂಕಿನಾದ್ಯಂತ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಕಲಿಕಾ ಚೇತರಿಕೆ ಮತ್ತು ಮಳೆಬಿಲ್ಲು ವಿಶೇಷ ಕಾರ್ಯಕ್ರಮಗಳ ಮೂಲಕಸೋಮವಾರ ಅದ್ದೂರಿಯಾಗಿ ಆರಂಭವಾದವು.

ಪಟ್ಟಣ ಸೇರಿದಂತೆ ತಾಲ್ಲೂಕಿನ ಹುನಕುಂಟಿ, ಮಾವಿನಭಾವಿ, ಕಳ್ಳಿಲಿಂಗಸುಗೂರು, ಹನುಮಗುಡ್ಡ, ನವಲಿ, ನರಕಲದಿನ್ನಿ, ಚಿತ್ತಾಪುರ, ಆನೆಹೊಸೂರು, ಬೆಂಡೋಣಿ, ಸುಣಕಲ್ಲ, ಈಚನಾಳ, ಸರ್ಜಾಪುರ, ಯರಡೋಣಿ ಸೇರಿದಂತೆ ಇತರೆಡೆ ಹಬ್ಬದ ವಾತಾವರಣ ಕಂಡುಬಂತು.

ಶಾಲಾ ಸಿಬ್ಬಂದಿ ಶಾಲೆಗಳ ಮುಖ್ಯದ್ವಾರಗಳಿಗೆ ತಳಿರು ತೋರಣ ಕಟ್ಟಿ, ಚಿತ್ತಾರದ ರಂಗೋಲಿ ಬಿಡಿಸಿ, ಮಕ್ಕಳಿಗೆ ಗುಲಾಬಿ ಹೂ, ಪಠ್ಯ ಪುಸ್ತಕ ವಿತರಿಸಿ ಸ್ವಾಗತಿಸಿದರು.

ADVERTISEMENT

ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ ಸುಧಾರಣ ಸಮಿತಿ ಸದಸ್ಯರು, ಶಿಕ್ಷಕರು ಮಕ್ಕಳನ್ನು ಮೊದಲ ದಿನ ಶಾಲೆಗೆ ಕರೆತರಲು ಪಾಲಕರಲ್ಲಿ ಜಾಗೃತಿ ಮೂಡಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹೊಂಬಣ್ಣ ರಾಠೋಡ ಮಾತನಾಡಿ, ‘ಶಿಕ್ಷಕ ಸಮೂಹ ತಾಲ್ಲೂಕಿನಾದ್ಯಂತ ಸ್ಥಳೀಯ ಪ್ರತಿನಿಧಿಗಳ ಸಹಯೋಗದಲ್ಲಿ ಶಾಲೆಗಳ ಆರಂಭಕ್ಕೆ ಮುನ್ನುಡಿ ಬರೆದಿದ್ದಾರೆ. ಮೊದಲ ದಿನ ಉತ್ತಮ ಸ್ಪಂದನೆ ದೊರೆತಿದೆ’ ಎಂದರು.

ಮಕ್ಕಳಿಗೆ ಸಹಿ ನೀಡಿ ಸ್ವಾಗತ

ಮಸ್ಕಿ: ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ತರಗತಿಗಳು ಸೋಮವಾರದಿಂದ ಆರಂಭವಾಗಿದ್ದು ಪಟ್ಟಣದ ವಿವಿಧ ಶಾಲೆಗಳಲ್ಲಿ ಮಕ್ಕಳನ್ನು ಅದ್ದೂರಿಯಾಗಿ ಬರ ಮಾಡಿಕೊಳ್ಳಲಾಯಿತು.

ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಜೊಗೀನ್ ರಾಮಣ್ಣ ಸ್ಮಾರಕ ಪ್ರೌಢ ಶಾಲೆ, ಬಯ್ಯಾಪೂರ ಮಹಾಂತಮ್ಮ ಲಿಂಗನಗೌಡ ಪ್ರಾಥಮಿಕ ಶಾಲೆ ಸೇರಿದಂತೆ ಹಲವು ಶಾಲೆಗಳ ಆಡಳಿತ ಮಂಡಳಿ ತರಗತಿ ಬಂದ ವಿದ್ಯಾರ್ಥಿಗಳಿಗೆ ಹೂವು ಹಾಗೂ ಸಿಹಿ ನೀಡಿ ಸ್ವಾಗತಿಸಿದರು.

ನರಸಗೌಡ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆ, ಸರಸ್ವತಿ ವಿದ್ಯಾನಿಕೇತನ ಶಾಲೆ, ವೀರಶೈವ ವಿದ್ಯಾವರ್ಧಕ ಸಂಘ ಸೇರಿದಂತೆ ವಿವಿಧ ಖಾಸಗಿ ಶಿಕ್ಷಣ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸಂಭ್ರಮ ಕಂಡುಬಂತು.

ಶಾಲೆಗಳ ಮುಂದೆ ರಂಗೋಲಿ ಹಾಕಿ ಅಲಂಕಾರ ಮಾಡಲಾಗಿತ್ತು. ಕೆಲವು ಕಡೆ ಟೆಂಗಿನ ಗರಿ, ತಳೀರು ತೋರಣಗಳನ್ನು ಕಟ್ಟಿದ್ದು
ಗಮನಸೆಳೆಯಿತು.

ಸಿಹಿ ಬಿಸಿಯೂಟ

ಸಿರವಾರ: ಈ ಶೈಕ್ಷಣಿಕ ವರ್ಷದ ಶಾಲಾ ಆರಂಭೋತ್ಸವವನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಹೂ, ಸಿಹಿ ನೀಡುವ ಮೂಲಕ ಸೋಮವಾರ
ಸ್ವಾಗತಿಸಿದರು.

‌ತರಗತಿಗೆ ಬಂದ ವಿದ್ಯಾರ್ಥಿಗಳು ಉತ್ಸಾಹದಿಂದ ಶಿಕ್ಷಕರೊಂದಿಗೆ ಪಾಲ್ಗೊಂಡರು.

ಶಾಲೆಗಳನ್ನು ತೆಂಗಿನ ಗರಿ, ಮಾವಿನ ಎಲೆ, ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ಬಿಸಿಯೂಟದ ಜತೆಗೆ ಸಿಹಿ ತಿನಿಸನ್ನು ಮಕ್ಕಳು ಶಿಕ್ಷಕರ ಸವಿದರು.

ಹಳ್ಳಿಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆಗೆ ಬಂದದ್ದು, ಪಟ್ಟಣ ಪ್ರದೇಶಗಳಲ್ಲಿ ಸಂಖ್ಯೆ ಗಣನೀಯವಾಗಿ ಕಡಿಮೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.