ADVERTISEMENT

ಪೊಲೀಸ್ ಠಾಣೆ ಎದುರು ಪ್ರತಿಭಟನೆ: ಪಿಎಸ್ಐ ಅಮಾನತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 13:11 IST
Last Updated 24 ನವೆಂಬರ್ 2021, 13:11 IST
ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯ ಮುಂದೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ಜಿಲ್ಲಾ ಘಟಕದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು
ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯ ಮುಂದೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ಜಿಲ್ಲಾ ಘಟಕದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು   

ರಾಯಚೂರು: ಪೊಲೀಸ್ ಠಾಣೆಯಲ್ಲಿ ಕಾರ್ಯಕರ್ತರನ್ನು ವಿನಾಕಾರಣ ಥಳಿಸಿದ ‌ಪಿಎಸ್ಐ ಮಂಜುನಾಥ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ಜಿಲ್ಲಾ ಘಟಕದ ಪದಾಧಿಕಾರಿಗಳು ಪಶ್ಚಿಮ ಪೊಲೀಸ್ ಠಾಣೆಯ ಮುಂದೆ ಬುಧವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

ಪ್ರತಿಭಟನಾನಿರತ ಕಾರ್ಯಕರ್ತರು ಪಿಎಸ್ಐ ಮಂಜುನಾಥರ ವಿರುದ್ಧ ಘೋಷಣೆ ಕೂಗಿ ಆಕ್ರೊಶ ವ್ಯಕ್ತಪಡಿಸಿದರು. ಜಮೀನು ವಿವಾದ ಬಗೆಹರಿಸುವ ಪ್ರಕರಣದಲ್ಲಿ ಬಿಲಾಲ್ ಎಂಬ ಯುವಕನ ಮೊಬೈಲ್ ವಶಪಡಿಸಿಕೊಂಡಿದ್ದ ಪಿಎಸ್ಐ ಅವರನ್ನು, ಮೊಬೈಲ್ ಮರಳಿಸುವಂತೆ ಮನವಿ ಮಾಡುವುದಕ್ಕೆ ಜಿಲ್ಲಾ ಅಧ್ಯಕ್ಷ ತೌಸಿಫ್ ಅಹ್ಮದ್ ಹಾಗೂ ಕಾರ್ಯದರ್ಶಿ ಜಿಲಾನಿ ಪಾಶಾ ಅವರು ಠಾಣೆಗೆ ಹೋಗಿದ್ದರು. ಇದನ್ನೇ ನೆಪ ಮಾಡಿಕೊಂಡು ಇಬ್ಬರ ಮೇಲೂ ದೌರ್ಜನ್ಯ ನಡೆಸಿ ಥಳಿಸಿದ್ದಾರೆ ಎಂದು ಆರೋಪಿಸಿದರು. ನ್ಯಾಯಕ್ಕಾಗಿ ಹೋದವರನ್ನು ಕೊಲೆ ಆರೋಪಿಗಳ ಜೊತೆ ಪೊಲೀಸ್ ಠಾಣೆಯಲ್ಲಿ ಒಂದು ದಿನ ಕೂಡಿ ಹಾಕಿದ್ದರು. ಆನಂತರ ಬಿಡುಗಡೆ ಮಾಡಿದ್ದಾರೆ ಎಂದು ಪ್ರತಿಭಟನಾನಿರತ ಮುಖಂಡ ಡಾ.ಸೋಹೆಲ್ ದೂರಿದರು.

ಡಿವೈಎಸ್‌ಪಿ ಶಿವನಗೌಡ ಪಾಟೀಲ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು. ‘ಈ ಪ್ರಕರಣದ ಕುರಿತು ವಿಚಾರಣೆ ನಡೆಸಿ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಪಿಎಸ್ಐ ಅವರು ತಪ್ಪು ಮಾಡಿದ್ದಲ್ಲಿ ಕ್ರಮಕ್ಕೆ ಗುರಿಪಡಿಸಲಾಗುವುದು’ ಎಂದು ಮನವರಿಕೆ ಮಾಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ADVERTISEMENT

ಪ್ರತಿಭಟನೆಯಲ್ಲಿ ಮುಖಂಡ ಮಹಮ್ಮದ್ ಶಫಿ, ಮಾಜಿದ್, ಅಸೀಫ್, ಜಿಲಾನಿ, ಮಹಮ್ಮದ್, ಬಷೀರ್ ಅಹ್ಮದ್, ಸಲ್ಮಾನ್ ಮತ್ತಿತರರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.