ADVERTISEMENT

ಸಮಾಜ ಸುಧಾರಣೆಯಲ್ಲಿ ಶಂಕರಾಚಾರ್ಯರ ಪಾತ್ರ ಪ್ರಮುಖ: ದತ್ತಾತ್ರೇಯ ವೆಂಕಟೇಶ ಜೋಶಿ

​ಪ್ರಜಾವಾಣಿ ವಾರ್ತೆ
Published 6 ಮೇ 2022, 13:13 IST
Last Updated 6 ಮೇ 2022, 13:13 IST
ರಾಯಚೂರಿನ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಶಂಕರಾಚಾರ್ಯರ ಭಾವಚಿತ್ರ ಪುಷ್ಪಾರ್ಚನೆ ಮಾಡಿ ನಮಿಸಿದರು.
ರಾಯಚೂರಿನ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಶಂಕರಾಚಾರ್ಯರ ಭಾವಚಿತ್ರ ಪುಷ್ಪಾರ್ಚನೆ ಮಾಡಿ ನಮಿಸಿದರು.   

ರಾಯಚೂರು: ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆ ಹಾಗೂ ಕಂದಾಚಾರಗಳ ವಿರುದ್ಧ ಶಂಕರಾಚಾರ್ಯರು ಧ್ವನಿ ಎತ್ತಿದ್ದರು. ಭಾರತೀಯ ಸಮಾಜದ ಸುಧಾರಣೆಯಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು ಎಂದು ಲಕ್ಕುಂಡಿಯ ದತ್ತಾತ್ರೇಯ ವೆಂಕಟೇಶ ಜೋಶಿ ಹೇಳಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶುಕ್ರವಾರ ಏರ್ಪಡಿಸಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಮಹನೀಯರ, ದಾರ್ಶನಿಕರ ಚಿಂತನೆ ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ತೋರಿದ ದಾರಿಯಲ್ಲಿ ಸಾಗಬೇಕು. ಮಹನೀಯರ ಜಯಂತಿಗಳ ಆಚರಣೆಯಿಂದ ಮೌಲ್ಯಯುತ ಹಾಗೂ ಅರ್ಥಪೂರ್ಣ ಸಂದೇಶಗಳು ಸಮಾಜಕ್ಕೆ ತಲುಪಲು ಸಾಧ್ಯ. ಶಂಕರಾಚಾರ್ಯರ ತತ್ವಾದರ್ಶಗಳು ಸಮಾಜಕ್ಕೆ ಮಾದರಿ ಎಂದು ಹೇಳಿದರು.

ADVERTISEMENT

ಶಂಕರಾಚಾರ್ಯರು ದೇಶದ ಎಲ್ಲೆಡೆ ಸಂಚರಿಸಿ ಅದ್ವೈತ ಸಿದ್ಧಾಂತ ಪ್ರಚಾರ ಮಾಡಿದರು. ಉತ್ತಮ ಬದುಕಿಗೆ ಶಂಕರಾಚಾರ್ಯರ ಸಂದೇಶಗಳು ಮಾರ್ಗದರ್ಶಕ. ಅವರ ತತ್ವ, ಸಿದ್ದಾಂತಗಳು ಸಾರ್ವಕಾಲಿಕ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಶಂಕರಾಚಾರ್ಯರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ಮೆರವಣಿಗೆಯಲ್ಲಿ ಮಕ್ಕಳ ಛದ್ಮ ವೇಶಭೂಷಣ ಎಲ್ಲರ ಗಮನ ಸೆಳೆಯಿತು.

ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೂರ ಜಹಾರ್ ಖಾನಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳ ವಿ.ನಾಯಕ, ಸಮಾಜದ ಜಿಲ್ಲಾಧ್ಯಕ್ಷ ಡಿ.ಕೆ.ಮುರಳೀಧರ್, ಶೃಂಗೇರಿ ಶ್ರೀ ಶಂಕರ ಮಠದ ವ್ಯವಸ್ಥಾಪಕ ಕೃಷ್ಣಮೂರ್ತಿ ಹೆಬ್ಸೂರ್, ಶಾರದಾ ಭಜನಾ ಮಂಡಳ ಅಧ್ಯಕ್ಷ ಅರುಣ ಕುದುರೆಮೋತಿ, ಆದಿ ಶಂಕರ ಸೇವಾ ಸಮಿತಿಯ ಅಧ್ಯಕ್ಷ ಶ್ರೀಪಾದ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.