ADVERTISEMENT

ಭಕ್ತರ ಸಂತೋಷವೇ ರಾಯರ ಸಂತೋಷ: ಶ್ರೀ ಸುಬುಧೇಂದ್ರ ತೀರ್ಥರು

ಮಹಾರಥೋತ್ಸವದ ಮೂಲಕ ಅನುಗ್ರಹ ಸಂದೇಶ ನೀಡಿದ ಪೀಠಾಧಿಪತಿ

ನಾಗರಾಜ ಚಿನಗುಂಡಿ
Published 29 ಆಗಸ್ಟ್ 2018, 18:51 IST
Last Updated 29 ಆಗಸ್ಟ್ 2018, 18:51 IST
ಮಂತ್ರಾಲಯದಲ್ಲಿ ಬುಧವಾರ ನಡೆದ ಮಹಾರಥೋತ್ಸವಕ್ಕೆ ಭಕ್ತ ಸಮೂಹ ಕೈಮುಗಿದು ನಮಿಸಿದರು
ಮಂತ್ರಾಲಯದಲ್ಲಿ ಬುಧವಾರ ನಡೆದ ಮಹಾರಥೋತ್ಸವಕ್ಕೆ ಭಕ್ತ ಸಮೂಹ ಕೈಮುಗಿದು ನಮಿಸಿದರು   

ಮಂತ್ರಾಲಯ: ಶ್ರೀ ರಾಘವೇಂದ್ರ ಸ್ವಾಮಿಗಳ 347 ನೇ ಆರಾಧನಾ ಮಹೋತ್ಸವದ ಕೊನೆಯ ದಿನ ಮಹಾರಥೋತ್ಸವವು ಸಂಭ್ರಮ, ಸಡಗರದಿಂದ ನೆರವೇರಿತು.

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಕಡೆಯ ಅಸಂಖ್ಯಾತ ಭಕ್ತರು ಪಾಲ್ಗೊಂಡು ತಮ್ಮ ಭಕ್ತಿ ಸಮರ್ಪಿಸಿದರು. ಪ್ರಹ್ಲಾದರಾಜರ ಉತ್ಸವ ಮೂರ್ತಿ ಹೊತ್ತ ಮಹಾರಥವು ಶ್ರೀಮಠದಿಂದ ವಿವಿಧ ವಾದ್ಯವೃಂದ, ಕಲಾ ತಂಡಗಳು, ಭಜನಾ ಮೇಳದೊಂದಿಗೆ ಸಾಗಿತು. ಮುಖ್ಯರಸ್ತೆ ಬಳಿಯ ಸುಜಯೀಂದ್ರ ತೀರ್ಥ ಸ್ವಾಗತ ಕಮಾನ್‌ ತಲುಪಿ ಅಲ್ಲಿಂದ ಮಠದ ಪ್ರಾಂಗಣಕ್ಕೆ ಮರಳಿತು.

’ತುಂಗಾತೀರ ನಿವಾಸವರದ ಗೋವಿಂದಾ.. ಗೋವಿಂದಾ,ಪ್ರಹ್ಲಾದವರದ ಗೋವಿಂದಾ... ಗೋವಿಂದಾ,ರಾಜಾಧಿರಾಜ ಗುರುಸಾರ್ವಭೌಮ ವರದ ಗೋವಿಂದಾ... ಗೋವಿಂದಾ’ ಜಯಘೋಷಗಳು ಮೊಳಗಿದವು.

ADVERTISEMENT

ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಹಾರಥೋತ್ಸವ ಆರಂಭಿಸುವ ಪೂರ್ವದಲ್ಲಿ ಭಕ್ತರನ್ನು ಉದ್ದೇಶಿಸಿ ಅನುಗ್ರಹ ಸಂದೇಶ ನೀಡಿದರು. ಇಡೀ ಭಕ್ತ ಸಮೂಹವು ಸಂದೇಶವನ್ನು ಆಲಿಸಿದರು.

’ಕಲಿಯುಗದ ಕಾಮಧೇನು ಕಲ್ಪವೃಕ್ಷರಾಗಿರುವ ಶ್ರೀ ರಾಯರು ತಮ್ಮ ಭಕ್ತರ ಮೋಕ್ಷಕ್ಕಾಗಿ ನಿಂತಿದ್ದಾರೆ. ಗುರುರಾಜರು ತಾವು ಒಬ್ಬರೇ ಸಾಧನೆ ಮಾಡದೇ ಎಲ್ಲರನ್ನು ಸಾಧನೆಯ ಕಡೆಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಅಪಾರ ಶಕ್ತಿಯನ್ನು ಹೊಂದಿದ್ದಾರೆ. ಭಕ್ತರ ಸಂತೋಷವೇ ರಾಯರ ಸಂತೋಷ’ ಎಂದರು.

’ಭಕ್ತರು ಎಲ್ಲಿದ್ದಾರೋ ಅಲ್ಲಿಗೆ ರಾಯರು ರಥಾರೂಢರಾಗಿ ಮಹಾಹರಥೋತ್ಸವದ ಮೂಲಕ ಬಂದಿದ್ದಾರೆ.ಭಕ್ತರ ಕಷ್ಟಕಾರ್ಪಣ್ಯ ದೂರ ಮಾಡುವರು. ಭಕ್ತರನ್ನು ಬಿಟ್ಟು ದೂರ ಹೋಗುವವರಲ್ಲ. ಪ್ರಹ್ಲಾದ ಅವತಾರಲ್ಲಿದ್ದಾಗ ನರಸಿಂಹನು ದರ್ಶನ ನೀಡಿ, ಮೋಕ್ಷ ನೀಡುವುದಾಗಿ ಹೇಳಿದರೂ ಒಪ್ಪಿಕೊಳ್ಳಲಿಲ್ಲ. ಭಕ್ತ ಸಮೂಹದೊಂದಿಗೆ ಮೋಕ್ಷಕ್ಕೆ ಬರುತ್ತೇನೆ ಎಂದು ಪ್ರಹ್ಲಾದ ಮಹಾರಾಜರು ಹೇಳಿದ್ದರು. ಆನಂತರದಲ್ಲಿ ಶ್ರೀರಾಘವೇಂದ್ರ ರಾಯರಾಗಿ ಅವತಾರ ಎತ್ತಿದರು. ಎಲ್ಲ ಬೇಡಿಕೆಗಳನ್ನು ಪೂರ್ಣ ಮಾಡಿ, ಭಕ್ತಿ, ಧರ್ಮವನ್ನು ಕಲಿಸುತ್ತಾರೆ’ ಎಂದರು.

ಕೊಡಗು ಹಾಗೂ ಕೇರಳ ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ಆತ್ಮ ಸ್ಥೈರ್ಯವನ್ನು ಶ್ರೀರಾಯರು ಕಲ್ಪಿಸಲಿ ಎಂದು ಪ್ರಾರ್ಥಿಸಲಾಗುವುದು. ಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವಂಥ ಕೆಲಸವನ್ನು ಗುರುಸಾರ್ವಭೌಮ ಶ್ರೀಮಠವು ನಿರಂತವಾಗಿ ಮಾಡುತ್ತಾ ಬಂದಿದೆ. ಇದರಿಂದ ಶ್ರೀಮಠವು ಮಾತೃ ವಾತ್ಸಲ್ಯದ ಮಹತ್ವವನ್ನು ಪಡೆದಿದೆ. ಕೊಡಗು ಹಾಗೂ ಕೇರಳ ರಾಜ್ಯಕ್ಕೆ ತಲಾ ₹15 ಲಕ್ಷ ರೂಪಾಯಿಗಳನ್ನು ತಾತ್ಕಾಲಿಕ ಪರಿಹಾರವಾಗಿ ನೀಡಲಾಗಿದೆ ಎಂದು ಹೇಳಿದರು.

ಮುಂಬರುವ ವರ್ಷಗಳಲ್ಲಿ ಸುವರ್ಣ ಮಂತ್ರಾಲಯವಾಗಿ ಪರಿವರ್ತಿಸಲಾಗುವುದು.ಮಂತ್ರಾಲಯದ ಸಮಗ್ರ ಅಭಿವೃದ್ಧಿ ಹೊಂದುವುದಕ್ಕೆ ಸ್ವಾಮಿಗಳು ಎಲ್ಲ ಮಾಡುತ್ತಾರೆ ಎಂದು ತಿಳಿದುಕೊಳ್ಳಬಾರದು. ಅಷ್ಟೊಂದು ಸಾಮರ್ಥ್ಯವನ್ನು ಹೊಂದಿಲ್ಲ. ಆದರೆ, ಗುರುರಾಜರ ಅನುಗ್ರಹದಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.

ಮಠವು ಶೈಕ್ಷಣಿಕವಾಗಿ, ಆಧ್ಯಾತ್ಮಿಕವಾಗಿ ಹಾಗೂ ವೈದ್ಯಕೀಯವಾಗಿ ಎಲ್ಲರಿಗೂ ತೆರೆದುಕೊಂಡಿದೆ. ಎಲ್ಲ ಧರ್ಮೀಯರು ಅವರನ್ನು ಆರಾಧಿಸುತ್ತಿದ್ದಾರೆ.ಭಕ್ತಾದಿಗಳಿಗೆ ಮಲ್ಟಿ ಮಿನಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲಾಗಿದ್ದು, ಉಚಿತ ಸೇವೆ ಪಡೆದುಕೊಳ್ಳಬಹುದು ಎಂದರು.

ಪುಷ್ಪವೃಷ್ಟಿ: ಮಠಾಧೀಶರ ರಥೋತ್ಸವ ನಡೆಸುವ ಪದ್ಧತಿ ಆಚರಣೆಯಲಿಲ್ಲ. ಹೀಗಾಗಿ ಶ್ರೀರಾಘವೇಂದ್ರರಾಯರ ಪೂರ್ವಾವತಾರ ಪ್ರಹ್ಲಾದ ಮಹಾರಾಜರ ಉತ್ಸವ ಮೂರ್ತಿಯನ್ನು ರಥಾರೂಢ ಮಾಡಿಸಲಾಗುತ್ತದೆ. ಶ್ರೀ ಸುಬುಧೇಂದ್ರ ತೀರ್ಥರು ಅನುಗ್ರಹ ಸಂದೇಶ ನೀಡಿದ ಬಳಿಕ ರಥೋತ್ಸವ ಆರಂಭವಾಯಿತು. ಶ್ರೀಗಳು ಹೆಲಿಕಾಪ್ಟರ್‌ ಮೂಲಕ ಬಂದು ರಥದ ಮೇಲೆ ಪುಷ್ಪವೃಷ್ಟಿ ಮಾಡಿ, ಭಕ್ತ ಸಮೂಹದತ್ತ ಕೈಬೀಸಿದರು.

ಮಂತ್ರಾಲಯದ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಜನರು ಬೆರಗಿನಿಂದ ಹೆಲಿಕಾಪ್ಟರ್‌ ವೀಕ್ಷಿಸಿದರು. ರಾಯರ ರಥೋತ್ಸವ ನಿಮಿತ್ತ ತೆಂಗಿನಕಾಯಿ ಒಡೆದು, ಪುಷ್ಪಮಾಲೆ ಹಾಕಿ ನಮಿಸುತ್ತಿರುವುದು ಕಂಡುಬಂತು. ಮಕ್ಕಳೊಂದಿಗೆ ಹಿರಿಯರು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.