ADVERTISEMENT

ಖಾಲಿ ಹುದ್ದೆಗಳ ಭರ್ತಿಗಾಗಿ ಸಹಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 8:39 IST
Last Updated 30 ಡಿಸೆಂಬರ್ 2025, 8:39 IST
ಸಿಂಧನೂರಿನ ಮಿನಿವಿಧಾನಸೌಧ ಕಚೇರಿಯ ಮುಂದೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಷನ್ ಅಖಿಲ ಭಾರತ ಸಮಿತಿಯ ಕರೆಯ ಮೇರೆಗೆ ತಾಲ್ಲೂಕು ಘಟಕದಿಂದ ಖಾಲಿ ಹುದ್ದೆಗಳ ಭರ್ತಿಗಾಗಿ ಸೋಮವಾರ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು
ಸಿಂಧನೂರಿನ ಮಿನಿವಿಧಾನಸೌಧ ಕಚೇರಿಯ ಮುಂದೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಷನ್ ಅಖಿಲ ಭಾರತ ಸಮಿತಿಯ ಕರೆಯ ಮೇರೆಗೆ ತಾಲ್ಲೂಕು ಘಟಕದಿಂದ ಖಾಲಿ ಹುದ್ದೆಗಳ ಭರ್ತಿಗಾಗಿ ಸೋಮವಾರ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು   

ಸಿಂಧನೂರು: ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಷನ್ ಅಖಿಲ ಭಾರತ ಸಮಿತಿಯ ಕರೆಯ ಮೇರೆಗೆ ತಾಲ್ಲೂಕು ಘಟಕದಿಂದ ಖಾಲಿ ಹುದ್ದೆಗಳ ಭರ್ತಿಗಾಗಿ ಸೋಮವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿಯ ಮುಂದೆ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.

ಕೇಂದ್ರ ಸರ್ಕಾರದ 78 ಇಲಾಖೆಗಳಲ್ಲಿ ಖಾಲಿ ಇರುವ 9.79 ಲಕ್ಷ ಹುದ್ದೆಗಳನ್ನು ಹಾಗೂ ರಾಜ್ಯದ 43 ಇಲಾಖೆಗಳಲ್ಲಿನ 2.85 ಲಕ್ಷ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು. ಎಲ್ಲ ನೇಮಕಾತಿಗಳ ವಯೋಮಿತಿಯನ್ನು ಕನಿಷ್ಠ ಐದು ವರ್ಷ ಹೆಚ್ಚಿಸಬೇಕು ಹಾಗೂ ಪಾರದರ್ಶಕವಾಗಿ ನಡೆಸಬೇಕು. ಎಲ್ಲ ರೀತಿಯ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಬೇಕು. ನೇಮಕಾತಿಯ ಅರ್ಜಿ ಶುಲ್ಕವನ್ನು ಸಂಪೂರ್ಣವಾಗಿ ಕೈಬಿಡಬೇಕು ಹಾಗೂ ನೇಮಕಾತಿ ಪರೀಕ್ಷೆಗಳಿಗೆ ಪರೀಕ್ಷಾರ್ಥಿಗಳು ಹಾಜರಾಗಲು ಉಚಿತ ಸಾರಿಗೆ ವ್ಯವಸ್ಥೆ ಮಾಡಬೇಕು. ಖಾಲಿ ಇರುವ ಚಿತ್ರಕಲಾ, ಸಂಗೀತ, ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವ ಜಾನೇಕಲ್ ಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸಿದ ವಿವಿಧ ಪಕ್ಷಗಳ ಸರ್ಕಾರಗಳು ಯುವಜನರನ್ನು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿವೆ. ಅವರ ಬಗ್ಗೆ ಯಾವುದೇ ಕಾಳಜಿಯನ್ನು ವಹಿಸುತ್ತಿಲ್ಲ. ಉದ್ಯೋಗಗಳನ್ನು ಕೊಡುತ್ತಿಲ್ಲ. ಗುತ್ತಿಗೆ, ಹೊರಗುತ್ತಿಗೆ, ಅತಿಥಿ ಶಿಕ್ಷಕರ ಹೆಸರಿನಲ್ಲಿ ಗೌರವದಿಂದ ಬದುಕಲು ಸಾಧ್ಯವಿಲ್ಲದ ವೇತನದಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಇತ್ತೀಚಿಗೆ ಧಾರವಾಡದಲ್ಲಿ ಉದ್ಯೋಗ ಕೊಡಿ ಎಂದು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ಉದ್ಯೋಗ ಆಕಾಂಕ್ಷಿಗಳ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ. ಇದು ಅತ್ಯಂತ ಖಂಡನೀಯ ಕ್ರಮವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಉಪನ್ಯಾಸಕ ಶಂಕರ್ ಗುರಿಕಾರ, ಭೀಮರಾಯ ವಕೀಲ, ಪತ್ರಕರ್ತರಾದ ನಾಗರಾಜ ಕವಿತಾಳ, ವೀರಭದ್ರಪ್ಪ ಜವಳಗೇರಾ, ಕನ್ನಡಪರ ಸಂಘಟನೆಗಳ ಮುಖಂಡರಾದ ಎಚ್.ಗಂಗಣ್ಣ, ಉಮೇಶಗೌಡ ಅರಳಹಳ್ಳಿ, ವೆಂಕಟೇಶ, ರಾಘವೇಂದ್ರ ಮತ್ತಿತರರು ಸಹಿ ಮಾಡಿ ಬೆಂಬಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.