ADVERTISEMENT

ಸಿಂಧನೂರು: ಮೂಲ ಸೌಕರ್ಯ ವಂಚಿತ ಏಳು ರಾಗಿ ಕ್ಯಾಂಪ್

ಇಲ್ಲಗಳ ನಡುವೆ ಬದುಕುತ್ತಿರುವ ಜನ: ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ

ಡಿ.ಎಚ್.ಕಂಬಳಿ
Published 24 ಜೂನ್ 2025, 5:11 IST
Last Updated 24 ಜೂನ್ 2025, 5:11 IST
ಸಿಂಧನೂರು ಹೊರವಲಯದಲ್ಲಿರುವ ಏಳು ರಾಗಿ ಕ್ಯಾಂಪ್‌ನಲ್ಲಿ ಫ್ಲೋರೈಡ್ ಮಿಶ್ರಿತ ಕೊಳವೆ ಬಾವಿ ನೀರು ಪಡೆಯುತ್ತಿರುವ ನಿವಾಸಿಗಳು
ಸಿಂಧನೂರು ಹೊರವಲಯದಲ್ಲಿರುವ ಏಳು ರಾಗಿ ಕ್ಯಾಂಪ್‌ನಲ್ಲಿ ಫ್ಲೋರೈಡ್ ಮಿಶ್ರಿತ ಕೊಳವೆ ಬಾವಿ ನೀರು ಪಡೆಯುತ್ತಿರುವ ನಿವಾಸಿಗಳು   

ಸಿಂಧನೂರು: ನಗರದಿಂದ 4 ಕಿಲೋ ಮೀಟರ್ ದೂರದಲ್ಲಿರುವ 31ನೇ ವಾರ್ಡ್‌ನ ವ್ಯಾಪ್ತಿಗೆ ಒಳಪಡುವ ಏಳುರಾಗಿ ಕ್ಯಾಂಪ್‌ನಲ್ಲಿ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ.

ಕ್ಯಾಂಪ್‌ನಲ್ಲಿ ಯಾರಾದರೂ ಮೃತಪಟ್ಟರೆ ಹೂಳಲು ಸ್ಮಶಾನವಿಲ್ಲ. ಸಿಂಧನೂರಿಗೆ ಬಂದು ಹೋಗಲು ರಸ್ತೆ ಇಲ್ಲ. ಫ್ಲೋರೈಡ್‌ ಮಿಶ್ರಿತ ಕೊಳವೆ ಬಾವಿ ನೀರಿನಿಂದಲೇ ದಾಹ ನೀಗಿಸಿಕೊಳ್ಳುವ ಅನಿವಾರ್ಯತೆ ಇದೆ.

ನಗರಸಭೆ ಮತ್ತು ವಿಧಾನಸಭಾ ಕ್ಷೇತ್ರಕ್ಕೆ ಆಯ್ಕೆಯಾಗಿರುವ ಎಲ್ಲರೂ ಮೂಲಸೌಕರ್ಯ ಒದಗಿಸುವ ಭರವಸೆ ನೀಡಿದ್ದಾರೆ. ಆದರೆ ಕ್ಯಾಂಪ್ ನಿವಾಸಿಗಳ ನಿತ್ಯದ ಗೋಳನ್ನು ಕೇಳಲು ಒಬ್ಬರೂ ಮನಸ್ಸು ಮಾಡಿಲ್ಲವೆಂದು ಕ್ಯಾಂಪ್ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಸ.ನಂ 17ರಲ್ಲಿ 3 ದಶಕಗಳ ಹಿಂದೆ ನಗರಸಭೆಯಿಂದ 20.31 ಎಕರೆ ಜಮೀನು ಖರೀದಿಸಿ ನಿವೇಶನ ರಹಿತರಿಗೆ ಹಕ್ಕುಪತ್ರ ನೀಡಲಾಗಿದೆ. ವಾಜಪೇಯಿ ಆವಾಸ್ ಯೋಜನೆಯಲ್ಲಿ ಕ್ಯಾಷುಟೆಕ್‌ನಿಂದ 380 ಮನೆಗಳನ್ನು ನಿರ್ಮಿಸಲಾಗಿದೆ. ಆ ಪೈಕಿ 180 ಮನೆಗಳು ಅಪೂರ್ಣಗೊಂಡಿವೆ.

ಇನ್ನುಳಿದ ಮನೆಗಳೂ ಕಳಪೆಯಾಗಿದ್ದು, ಅನಿವಾರ್ಯವಾಗಿ ಬಡವರು ವಾಸಿಸುತ್ತಿದ್ದಾರೆಂದು ಕ್ಯಾಂಪ್ ನಿವಾಸಿ ಚೆನ್ನಬಸವ ಅಮೀನಗಡ ಹೇಳುತ್ತಾರೆ.

ಕ್ಯಾಂಪ್‌ನಲ್ಲಿ ಕಿರಿಯ ಪ್ರಾಥಮಿಕ ಶಾಲೆ ಹೊರತುಪಡಿಸಿದರೆ ಸರ್ಕಾರದ ಯಾವುದೇ ಸೌಕರ್ಯ ಲಭಿಸಿಲ್ಲ ಎಂದು ಯಮುನಪ್ಪ ಕಾಳಾಪೂರ ಬೇಸರ ವ್ಯಕ್ತಪಡಿಸಿದ್ದಾರೆ.

‘ಕ್ಯಾಂಪ್ ಸುತ್ತ ಗದ್ದೆಗಳಿವೆ. ಮಳೆ ಬಂದರೆ ಕಾಲಿಡಲು ಗಟ್ಟಿ ನೆಲ ಸಿಗುವುದಿಲ್ಲ. ವೈಯಕ್ತಿಕ ಶೌಚಾಲಯಗಳಿಲ್ಲ. ಗದ್ದೆ ಇರುವುದರಿಂದ ಬಯಲು ಶೌಚಕ್ಕೆ ಅವಕಾಶ ಇಲ್ಲ. ನಮ್ಮ ಸಂಕಟ ಯಾರಿಗೆ ಹೇಳಬೇಕೋ ತಿಳಿಯದಾಗಿದೆ’ ಎಂದು ದುರುಗಮ್ಮ ಪೂಜಾರಿ, ನಾಗಮ್ಮ ಜೋಗತಿ, ಫಕೀರಮ್ಮ ಮತ್ತು ಶಾಂತಮ್ಮ ತಮ್ಮ ಸಂಕಟ ಹೊರಹಾಕಿದರು.

‘ಹೈಟೆಕ್ ಶೌಚಾಲಯ ಕಟ್ಟಿಕೊಡುವುದಾಗಿ ಶಾಸಕ ಹಂಪನಗೌಡ ಬಾದರ್ಲಿ ಮತ್ತು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಭರವಸೆ ನೀಡಿದ್ದರು. ಈಗ ಕೇಳಲು ಹೋದರೆ ಪೌರಾಯುಕ್ತರಿಗೆ ಹೇಳುತ್ತೇನೆ ಹೋಗಿ ಭೇಟಿಯಾಗಿ’ ಎಂದು ಶಾಸಕರು ಹೇಳುತ್ತಾರೆ. ಅವರಲ್ಲಿಗೆ ಹೋದರೆ ಎರಡು ತಿಂಗಳು ತಡೆಯಿರಿ, ಮೂರು ತಿಂಗಳು ತಡೆಯಿರಿ ಎನ್ನುತ್ತಾ ಹೀಗೆ ಕಾಲನೂಕುತ್ತಿದ್ದಾರೆ’ ಎಂದು ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫ್ಲೋರೈಡ್ ಮಿಶ್ರಿತ ನೀರು ಪೂರೈಕೆ ಸತ್ತರೆ ಹೂಳಲು ಜಾಗವಿಲ್ಲ ಅಸಮರ್ಪಕ ವಿದ್ಯುತ್ ಪೂರೈಕೆ
ನಾನು ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಆ ವಾರ್ಡ್‌ನ ಸಮಸ್ಯೆ ಗಮನಕ್ಕೆ ಬಂದಿಲ್ಲ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತೇನೆ
ಶೃತಿ ಪ್ರಭಾರ ಪೌರಾಯುಕ್ತೆ ನಗರಸಭೆ
ಮಸ್ಕಿ ಮುಖ್ಯರಸ್ತೆಯಿಂದ ಏಳು ರಾಗಿ ಕ್ಯಾಂಪ್‌ನವರೆಗೆ ರಸ್ತೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸುತ್ತಿದ್ದೇವೆ. ಮೌಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುತ್ತೇವೆ
ಮಂಜುಳಾ ಪ್ರಭುರಾಜ ಅಧ್ಯಕ್ಷರು ನಗರಸಭೆ

ರಸ್ತೆಯ ಸ್ಥಿತಿ ದೇವರೇ ಗತಿ

ನಗರಸಭೆಯಿಂದ ನಿವೇಶನ ನೀಡಿ ಕ್ಯಾಂಪ್ ನಿರ್ಮಿಸಲಾಗಿದೆ. ಆದರೆ ಇದಕ್ಕೆ ಸರ್ಕಾರದಿಂದ ದಾರಿಯ ಸೌಕರ್ಯ ಇಲ್ಲ. ಖಾಸಗಿ ವ್ಯಕ್ತಿಗಳ ಹೊಲದಲ್ಲಿ ಇರುವ ದಾರಿಯೂ ಹದಗೆಟ್ಟಿದೆ. ಅದಕ್ಕೆ ಮರಂ ಹಾಕಿ ಸುಧಾರಣೆ ಮಾಡಿಕೊಳ್ಳುತ್ತೇವೆಂದರೆ ಜಮೀನಿನ ಮಾಲೀಕರು ಅವಕಾಶ ಕೊಡುತ್ತಿಲ್ಲ. ನಗರಸಭೆ ಭೂಸ್ವಾಧೀನ ಮಾಡಿಕೊಂಡು ದಾರಿ ಸೌಕರ್ಯ ಮಾಡಿಕೊಡಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

Cut-off box - ಶಾಸಕರ ಮನೆ ಮುಂದೆ ಧರಣಿ ಪ್ರಸ್ತುತ ಕ್ಯಾಂಪ್‌ನ ಖಾಸಗಿ ವ್ಯಕ್ತಿಗಳ ಹೊಲದಲ್ಲಿ ದಾರಿಯಿದ್ದು ಅದರಲ್ಲಿ ದೊಡ್ಡ ದೊಡ್ಡ ತೆಗ್ಗು–ದಿನ್ನೆಗಳು ಬಿದ್ದಿವೆ. ವಾಹನ ಸಂಚಾರ ಕಷ್ಟವಾಗಿದೆ. ಶಾಲಾ–ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಕಾರಣ ರಸ್ತೆ ನಿರ್ಮಿಸುವ ತನಕ ಶಾಸಕ ಹಂಪನಗೌಡ ಬಾದರ್ಲಿ ಅವರ ನಿವಾಸದ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕುಳಿತುಕೊಳ್ಳಲಾಗುವುದು ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಚನ್ನಬಸವ ಅಮೀನಗಡ ಸಂಘಟನಾ ಕಾರ್ಯದರ್ಶಿ ಸಾದಿಕ್ ಮೇಸ್ತ್ರಿ ಮೌನೇಶ ನಾಯಕ ಬಸವರಾಜ ನಾಯಕ ಮಾರೇಶ ನಾಯಕ ಕನಕಪ್ಪ ಮತ್ತಿತರರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.