ADVERTISEMENT

ಸಿಂಧನೂರು: 13 ರಿಂದ ಹಜರತ್ ಸೈಯ್ಯದ್ ತಾಜುದ್ದೀನ್ ಬಾಬಾ ಉರುಸು

ಸಿಂಧನೂರು: ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಗಮ

ಡಿ.ಎಚ್.ಕಂಬಳಿ
Published 8 ಮಾರ್ಚ್ 2020, 19:30 IST
Last Updated 8 ಮಾರ್ಚ್ 2020, 19:30 IST
ಸಿಂಧನೂರಿನ ಹಿರೇಹಳ್ಳದ ಬಳಿಯಿರುವ ಹಜರತ್ ಸೈಯ್ಯದ್ ತಾಜುದ್ದೀನ್ ಬಾಬಾ ಉರ್ಫ ರಾಜಾ ಬಾಗಸವಾರ ಅವರ 72ನೇ ಉರುಸು ನಿಮಿತ್ತ ಸಿದ್ಧತೆ ಕಾರ್ಯ ಭರದಿಂದ ಸಾಗಿರುವುದು
ಸಿಂಧನೂರಿನ ಹಿರೇಹಳ್ಳದ ಬಳಿಯಿರುವ ಹಜರತ್ ಸೈಯ್ಯದ್ ತಾಜುದ್ದೀನ್ ಬಾಬಾ ಉರ್ಫ ರಾಜಾ ಬಾಗಸವಾರ ಅವರ 72ನೇ ಉರುಸು ನಿಮಿತ್ತ ಸಿದ್ಧತೆ ಕಾರ್ಯ ಭರದಿಂದ ಸಾಗಿರುವುದು   

ಸಿಂಧನೂರು: ಸಿಂಧನೂರಿನಲ್ಲಿ ಪ್ರತಿವರ್ಷ ಹೋಳಿ ಹುಣ್ಣಿಮೆಯ ನಂತರ ಐದು ದಿನದಲ್ಲಿ ನಡೆಯುವ ಹಜರತ್ ಸೈಯ್ಯದ್ ತಾಜುದ್ದೀನ್ ಬಾಬಾ ಅವರ 72ನೇ ಉರುಸು ಆಚರಣೆ ಮಾ.13, 14 ಮತ್ತು 15 ರಂದು ನಡೆಯಲಿದೆ.

ನವಲಗುಂದ ಹತ್ತಿರದ ಯವನೂರ ಗ್ರಾಮದವರಾದ ರಾಜಾ ಬಾಗಸವಾರ ಅವರು ನಗರದ ಹಿರೇಹಳ್ಳದ ಪಕ್ಕದಲ್ಲಿರುವ ಬಸವಂತರಾಯ್ ಪೊಲೀಸ್ ಪಾಟೀಲ್‍ರ ಹೊಲದಲ್ಲಿ ಕುಳಿತು ಹೋಗಿದ್ದರಂತೆ. ಬಾಗಸವಾರ ಎಂದರೆ ಹುಲಿಯನ್ನು ಸವಾರಿ ಮಾಡಿದ ಮಹಾಪುರುಷ ಎಂದರ್ಥ. ಅದರ ನೆನಪಿನಾರ್ಥವಾಗಿ ಆ ಜಾಗದಲ್ಲಿ ಭಕ್ತರು ಹಲವು ವರ್ಷಗಳ ಕಾಲ ಚಿಕ್ಕದೊಂದು ಕಟ್ಟೆ ಕಟ್ಟಿ, ಪೂಜೆ ಸಲ್ಲಿಸುತ್ತಿದ್ದರು.

ತದನಂತರ ಶೇಖ್ ಹುಸೇನಸಾಬ ಮುಜಾವರ್ ಎನ್ನುವವರು ಆ ಸ್ಥಳದಲ್ಲಿ ಉರುಸು ಆರಂಭಿಸಿದ್ದು, ಈಗ 71 ವರ್ಷ ಗತಿಸಿ 72ನೇ ಉರುಸು ನಡೆಯುತ್ತಿದೆ. ಅವರ ನಂತರ ಕನೂಲ್‍ಸಾಬ ಎನ್ನುವವರು ರಾಜಶೇಖರ ಪಾಟೀಲ್ ಮತ್ತು ಅವರ ಸಹೋದರರ ಸಹಕಾರದಿಂದ ದರ್ಗಾ ನಿರ್ಮಿಸಿದ್ದಾರೆ. ಗುಮ್ಮಟವನ್ನು ಭಕ್ತರ ಸಹಾಯದಿಂದ ಕಟ್ಟಿರುವುದಾಗಿ ಮುಜಾವರ್ ಮಹಿಬೂಬಸಾಬ ಹೇಳುತ್ತಾರೆ.

ADVERTISEMENT

ಪ್ರತಿವರ್ಷ ನಡೆಯುವ ಈ ಉರುಸಿನಲ್ಲಿ ತಾಲ್ಲೂಕಿನ ಹಲವಾರು ಗ್ರಾಮಗಳಿಂದ ಭಕ್ತಾದಿಗಳು ಬಂದು ಹೋಗುತ್ತಾರೆ. ಒಟ್ಟು 15 ದಿನಗಳ ಕಾಲ ನಡೆಯುವ ಈ ಉರುಸಿನಲ್ಲಿ ಸುಮಾರು 50 ಸಾವಿರ ಭಾಗವಹಿಸುತ್ತಾರೆ ಎಂದು ದರ್ಗಾ ಕಮಿಟಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಉಪಾಧ್ಯಕ್ಷ ಖಾಸಿಂ ಪಟೇಲ್, ಪ್ರಧಾನ ಕಾರ್ಯದರ್ಶಿ ಚನ್ನಬಸವ ಗಸ್ತಿ, ಕಾರ್ಯದರ್ಶಿ ಮಹ್ಮದ್ ಮಸೂರ್ ಹೇಳುತ್ತಾರೆ.

ರೋಗ ನಿವಾರಕ ಪೀರಾ

ಯಾವುದೇ ರೀತಿಯ ರೋಗವಿರಲಿ ಈ ದೇವರಿಗೆ ಹರಕೆ ಹೊತ್ತರೆ ನಿವಾರಣೆಯಾಗುತ್ತದೆ ಎನ್ನುವ ಪ್ರತೀತಿಯಿದೆ. ಯಾವುದಾದರೂ ರೋಗ-ರುಜಿನಿಗಳು ಕಾಟ ಜಾಸ್ತಿಯಾದಾಗ ಭಕ್ತರು ಉಪ್ಪು ತಂದು ಸಮರ್ಪಿಸಿದರೆ ಅದರಿಂದ ಗುಣಮುಖರಾಗುತ್ತಾರೆಂಬ ನಂಬುಗೆ ಭಕ್ತರಲ್ಲಿದೆ. ಇದರಿಂದಲೇ ರೋಗ ನಿವಾರಕ ಪೀರಾ ಯಮನೂರಪ್ಪ ಎನ್ನಲಾಗಿದೆ.

ಉರುಸು ವಿಶೇಷ

ತಮ್ಮ ಇಷ್ಟಾರ್ಥ ಸಿದ್ದಿಗಾಗಿ ದೀರ್ಘದಂಡ ನಮಸ್ಕಾರ ಹಾಕುವುದು, ಬೆಳ್ಳಿಯ ಕಡಗ (ಬೇಡಿ), ಹೂವಿನ ಕಡಗ (ಬೇಡಿ) ಧರಿಸಿಕೊಂಡು ಶ್ರದ್ಧಾಭಕ್ತಿಯಿಂದ ವ್ರತಾಚರಣೆ ಮಾಡುವುದು ಈ ಉರುಸಿನ ವಿಶೇಷವಾಗಿದೆ.

ಈ ಉರುಸಿನಲ್ಲಿ ಹಿಂದೂ-ಮುಸ್ಲಿಮರೆಂಬ ಬೇಧ-ಭಾವ ಇಲ್ಲದೆ ಎಲ್ಲ ಸಮುದಾಯದವರು ಶ್ರದ್ಧಾಭಕ್ತಿಯಿಂದ ಉರುಸಿಗೆ ಬಂದು ಹರಕೆ ತೀರಿಸುತ್ತಾರೆ. ಮುಸ್ಲಿಮರು ಯಮನೂರಸಾಬ, ತಾಜುದ್ದೀನ್ ಎಂದು ತಮ್ಮ ಮಕ್ಕಳಿಗೆ ಹೆಸರಿಟ್ಟರೆ, ಹಿಂದೂಗಳು ತಾಜಪ್ಪ, ಯಮನೂರಪ್ಪ ಎಂದು ಹೆಸರಿಟ್ಟು ಭಕ್ತಿ ಮೆರೆಯುತ್ತಾರೆ.

ಮೂರು ದಿನ ಸಂಭ್ರಮ

ನಗರದ ಪಕ್ಕದ ಹಿರೇಹಳ್ಳದ ದಂಡೆಯಲ್ಲಿ ಇರುವ ಯಮನೂರಪ್ಪ ದರ್ಗಾದ ಉರುಸು ಮಾರ್ಚ್ 13 ರಂದು ರಾಜಶೇಖರ ಪಾಟೀಲರ ಮನೆಯಿಂದ ಗಂಧ ಹೊರಡುವ ಮುಖಾಂತರ ಆರಂಭಗೊಳ್ಳುತ್ತದೆ. 14 ರಂದು ಬೆಳಗಿನಿಂದ ಸಂಜೆಯವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು 15 ರಂದು ಜಯಾರತ್ ಕಾರ್ಯಕ್ರಮವಿರುತ್ತದೆ.

ಈಗಾಗಲೇ ಉಸುರು ನಿಮಿತ್ಯ ಆಟಿಕೆ ಸಾಮಾನು, ಸಿಹಿ ಪದಾರ್ಥಗಳು, ಖಾ-ಮಂಡಾಳ ಮತ್ತಿತರ ಅಂಗಡಿಗಳನ್ನು ಹಾಕುವ ಕಾರ್ಯ ಭರದಿಂದ ಸಾಗಿದೆ. ಅಲ್ಲದೆ ಜೋಕಾಲಿಯಂತಹ ಮನರಂಜನಾ ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ.

ಜಾತಿ-ಜಾತಿಗಳ ಮಧ್ಯೆ ಬಹುದೊಡ್ಡ ಕಂದಕಗಳನ್ನು ಸ್ವಯಂ ಸೃಷ್ಟಿಸಿಕೊಂಡಿರುವ ಇಂದಿನ ದಿನಗಳಲ್ಲಿ ಮನೆ-ಮನಗಳ ಭಾವನೆಗಳನ್ನು ಬೆಸೆಯುವ ಇಂತಹ ಹಬ್ಬ ಹಾಗೂ ಉರುಸುಗಳು ದಾರಿ ತಪ್ಪುವ ಭಾವನೆಗಳನ್ನು ಬೆಸೆಯಲು ಸಹಾಯಕವಾಗುತ್ತವೆ ಎಂಬುದು ಸ್ಥಳೀಯ ನಾಗರಿಕರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.