ADVERTISEMENT

‘ಸಿದ್ದರಾಮಯ್ಯರನ್ನು ಕೆಳಗಿಳಿಸುವ ಸಂಚು’

ಸಿಪಿಐಎಂಎಲ್ ಮಾಸ್‌ಲೈನ್ ಕಾರ್ಯದರ್ಶಿ ಪೂಜಾರ ಆರೋಪ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 15:07 IST
Last Updated 26 ಸೆಪ್ಟೆಂಬರ್ 2024, 15:07 IST
ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಯುವ ಒಕ್ಕೂಟದಿಂದ ಸಿಂಧನೂರಿನಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು
ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಯುವ ಒಕ್ಕೂಟದಿಂದ ಸಿಂಧನೂರಿನಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು   

ಸಿಂಧನೂರು: ‘ಕೋಮುವಾದಿ ಶಕ್ತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸಂಚು ನಡೆಸಿವೆ. ಈ ಸಮಯದಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯ ಅವರ ಬೆನ್ನಿಗೆ ನಿಲ್ಲಬೇಕಾದ ಅಗತ್ಯವಿದೆ’ ಎಂದು ಸಿಪಿಐಎಂಎಲ್ ಮಾಸ್‌ಲೈನ್ ರಾಜ್ಯ ಘಟಕದ ಕಾರ್ಯದರ್ಶಿ ಡಿ.ಎಚ್.ಪೂಜಾರ ಹೇಳಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಟಿಪ್ಪುಸುಲ್ತಾನ್ ಬಗೆಗೆ ನೀಡಿರುವ ಹೇಳಿಕೆ ಖಂಡಿಸಿ ಗುರುವಾರ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಬಸನಗೌಡ ಪಾಟೀಲ ಯತ್ನಾಳರು ಸದಾ ಅನ್ಯಧರ್ಮೀಯರ ವಿರುದ್ಧ ದ್ವೇಷಕಾರುತ್ತ ಬಂದಿದ್ದಾರೆ. ಶಾಂತಿ, ನೆಮ್ಮದಿ ಮತ್ತು ಸಾಮರಸ್ಯದಿಂದ ಬಾಳುವ ಕನ್ನಡ ನಾಡಿನ ಜನರ ನಡುವೆ ಕಂದಕ ಸೃಷ್ಟಿಸುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ಕೋಮು ಗಲಭೆಗಳನ್ನು ಪ್ರಚೋದಿಸುವ ಇಂಥವರ ಶಾಸಕ ಸ್ಥಾನವನ್ನು ರಾಜ್ಯಪಾಲರು ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಕಾಂಗ್ರೆಸ್ ಮುಖಂಡ ನಿರುಪಾದೆಪ್ಪ ಗುಡಿಹಾಳ ವಕೀಲ ಮಾತನಾಡಿ, ‘ಸಂವಿಧಾನದ ಅಡಿಯಲ್ಲಿ ಶಾಸಕರಾಗಿರುವ ಯತ್ನಾಳ ಸಂವಿಧಾನ ವಿರೋಧಿಯಾಗಿ ವರ್ತಿಸುತ್ತಿರುವುದು ದೇಶದ್ರೋಹಿ ಕೃತ್ಯವಾಗುತ್ತದೆ’ ಎಂದು ಟೀಕಿಸಿದರು.

ಮುಸ್ಲಿಂ ಸಮಾಜದ ಯುವ ಮುಖಂಡ ಸೈಯದ್ ಇರ್ಫಾನ್ ಮಾತನಾಡಿ, ‘ಸ್ವಾತಂತ್ರ್ಯ ಹೋರಾಟಗಾರರನ್ನು ನಿಂದಿಸುವವರ ವಿರುದ್ಧ ಪ್ರಬಲ ಹೋರಾಟ ಮಾಡಬೇಕಾದ ಅಗತ್ಯವಿದೆ’ ಎಂದರು.

ಯುವಕನೊಬ್ಬ ಬಸನಗೌಡ ಪಾಟೀಲ ಯತ್ನಾಳರ ಮುಖವಾಡ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಟಿಪ್ಪುಸುಲ್ತಾನ್ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಖಾಜಿ ಮಲಿಕ್, ‘ಸೌಹಾರ್ದಕ್ಕೆ ಹೆಸರಾದ ಕನ್ನಡ ನಾಡಿನಲ್ಲಿ ಶಾಂತಿ ಕದಡುವ ಕೆಲಸ ಮಾಡಬಾರದು’ ಎಂದರು.

ಗ್ರೇಡ್-2 ತಹಶೀಲ್ದಾರ್ ಚಂದ್ರಶೇಖರ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಲಾಯಿತು.

ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಯುವ ಒಕ್ಕೂಟದ ಸಂಚಾಲಕ ಹನುಮಂತ ಕರ್ನಿ ನೇತೃತ್ವದಲ್ಲಿ  ಪ್ರತಿಭಟನೆ ನಡೆಯಿತು. ಮುಖಂಡರಾದ ಸೈಫುಲ್ಲಾಖಾನ್, ಎಚ್.ಬಾಷಾ, ಸೊಹೆಲ್ ದೇಸಾಯಿ, ಬಸವರಾಜ ಬಾದರ್ಲಿ, ವಿಜಯಕುಮಾರ್.ಬಿ., ಸುದೀಪ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.