ಸಿಂಧನೂರು: ತಾಲ್ಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಬೊಲೆರೊ ವಾಹನ ಡಿಕ್ಕಿ ಒಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ತುರ್ವಿಹಾಳ ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಬುಧವಾರ ಬೆಳಗಿನ ಜಾವ ಸಿಂಧನೂರು ರಸ್ತೆಯಲ್ಲಿ ವಾಯುವಿಹಾರ ಮಾಡಿ ವಸತಿ ಶಾಲೆಗೆ ವಾಪಸ್ ಬರುತ್ತಿದ್ದಾಗ ಸಿಂಧನೂರು ಕಡೆಯಿಂದ ತಾವರಗೇರಾ ಕಡೆಗೆ ಅತಿ ವೇಗವಾಗಿ ತೆರಳುತ್ತಿದ್ದ ಬೊಲೆರೊ ವಾಹನ ಇಬ್ಬರು ವಿದ್ಯಾರ್ಥಿಗಳಿಗೆ ಡಿಕ್ಕಿ ಒಡೆದಿದೆ.
ವಿದ್ಯಾರ್ಥಿ ಅಭಿಷೇಕ ಮೋತಿಲಾಲ್ ದೇಸಾಯಿ ಬೋಗಾಪುರ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವ ಆಗಿದೆ. ಇನ್ನೊಬ್ಬ ವಿದ್ಯಾರ್ಥಿ ವೆಂಕಟೇಶ ಹನುಮಪ್ಪಗೆ ಕಾಲು ಮುರಿದಿದೆ. ತಕ್ಷಣ ಗಾಯಾಳು ಗಳನ್ನು ತುರ್ವಿಹಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ನಂತರ ಆಂಬುಲೆನ್ಸ್‌ನಲ್ಲಿ ಸಿಂಧನೂರು ನಗರದ ತಾಲ್ಲೂಕು ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಲಾಯಿತು. ಅಭಿಷೇಕ ಸ್ಥಿತಿ ಚಿಂತಾಜನಕ ಆಗಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ಕಳುಹಿಸಲಾಗಿದೆ. ವೆಂಕಟೇಶನನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೊಲೆರೊ ವಾಹನ ಚಾಲಕ ವಾಹನ ಸಹಿತ ಪರಾರಿಯಾಗಿದ್ದಾನೆ. ಆ ಸಮಯದಲ್ಲಿ ಸಿಂಧನೂರಿನಿಂದ ತಾವರಗೇರಾ ಕಡೆಗೆ ನಾಲ್ಕು ವಾಹನಗಳು ಹೋಗಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷಯ ತಿಳಿದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಅವರು ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿ ಮುಖ್ಯಶಿಕ್ಷಕ ಗಂಗಪ್ಪ, ಶಿಕ್ಷಕರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಕಾಂಗ್ರೆಸ್ ಮುಖಂಡ ಆರ್.ಸಿದ್ದನಗೌಡ ತುರ್ವಿಹಾಳ ಸಿಂಧನೂರಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ ಕುಟುಂಬದವರಿಗೆ ಧೈರ್ಯ ತುಂಬಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.