ಸಿಂಧನೂರು: ಮೈಸೂರು ದಸರಾ ಮಾದರಿಯಲ್ಲಿ ಸಿಂಧನೂರಿನಲ್ಲಿ ಕಳೆದ ವರ್ಷ ದಸರಾ ಮಹೋತ್ಸವ ಅದ್ದೂರಿಯಾಗಿ ಆಚರಿಸಲಾಗಿತ್ತು. ಶಾಸಕ ಹಂಪನಗೌಡ ಬಾದರ್ಲಿ ಈ ಬಾರಿಯೂ ಅದಕ್ಕಿಂತ ವಿಶಿಷ್ಟವಾಗಿ ದಸರಾ ಮಹೋತ್ಸವ ಆಚರಿಸಲು ನಿರ್ಧರಿಸಿದ್ದಾರೆ.
ಕಳೆದ ವರ್ಷ ಸಿಂಧನೂರಿನಲ್ಲಿ ಮಾತ್ರ ದಸರಾ ಉತ್ಸವ ನಡೆಸಲಾಗಿತ್ತು. ಈ ಬಾರಿ ಗ್ರಾಮೀಣ ಪ್ರದೇಶದ ಅಂಬಾಮಠ, ಗಾಂಧಿನಗರ, ಪುನರ್ವಸತಿ ಕ್ಯಾಂಪ್, ಪಗಡದಿನ್ನಿ ಮತ್ತು ರಾಗಲಪರ್ವಿ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಆಚರಿಸುವ ಮೂಲಕ ಕ್ಷೇತ್ರದ ಎಲ್ಲಾ ಹಳ್ಳಿಗಳಿಗೂ ದಸರಾ ಮಹೋತ್ಸವದ ಮನೋರಂಜನೆ ಮುಟ್ಟಿಸಲು ದಸರಾ ಉತ್ಸವ ಸಮಿತಿ ತೀರ್ಮಾನಿಸಿದೆ.
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಸಿಂಧನೂರು ದಸರಾ ಉತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ದಸರಾ ಉತ್ಸವ ಆಚರಿಸಲಾಗುತ್ತಿದ್ದು, ಈ ಸಮಿತಿಯಲ್ಲಿ ವಿವಿಧ ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಗಳ ಮುಖಂಡರು ಮತ್ತು ವಿವಿಧ ಸಮುದಾಯಗಳ ಮುಖಂಡರು ಇದ್ದಾರೆ.
ಈಗಾಗಲೇ ನಗರದಲ್ಲಿ ವೈವಿಧ್ಯಮಯ ಬಣ್ಣಗಳ ವಿದ್ಯುತ್ ದೀಪಗಳನ್ನು ಹಾಕಲಾಗಿದ್ದು, ಕತ್ತಲಾದರೆ ಸಾಕು ನಗರದ ರಾಯಚೂರು-ಗಂಗಾವತಿ ರಸ್ತೆ, ಕುಷ್ಟಗಿ ರಸ್ತೆ, ಪಿಡಬ್ಯ್ಲೂಡಿ ಕ್ಯಾಂಪ್ ಸೇರಿದಂತೆ ಒಳ ರಸ್ತೆಗಳಲ್ಲೂ ಬಣ್ಣದ ವಿದ್ಯುತ್ ದೀಪಗಳು ಝಗಮಗಿಸುತ್ತವೆ.
ಗ್ರಾಮೀಣ ಪ್ರದೇಶದಲ್ಲಿ ಸೆ.22ರಿಂದ 27ರವರೆಗೆ ಕೆಸರಿನಲ್ಲಿ ಹಗ್ಗ-ಜಗ್ಗಾಟ, ಕಬಡ್ಡಿ ಪಂದ್ಯಾಟ, ರಂಗೋಲಿ ಸ್ಪರ್ಧೆ, ರೊಟ್ಟಿ ತಟ್ಟುವ ಸ್ಪರ್ಧೆ, ವಿವಿಧ ಕಲಾತಂಡಗಳಿಂದ ಸಂಗೀತ, ತತ್ವಪದ, ಜನಪದ ಗೀತೆ, ಜನಪದ ನೃತ್ಯ ಮತ್ತು ಹಾಸ್ಯ ಸಂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕೃಷಿ, ಆರೋಗ್ಯ, ಶಿಕ್ಷಣ ಕುರಿತು ನಾಟಕಗಳ ಪ್ರದರ್ಶನ ನಡೆಯಲಿದೆ. ಸರಿಗಮಪ ಖ್ಯಾತಿಯ ರಮೇಶ ಲಮಾಣಿ, ಸುಪ್ರೀತ್, ವರ್ಣಾ, ಜ್ಞಾನೇಶ, ಶಿವಾನಿ, ಭೂಮಿಕಾ, ಸವಿತಾ ಮಲ್ನಾಡ್, ಬಾಳು ಬೆಳಗುಂದಿ, ಖಾಸಿಂ ಅಲಿ, ರಮ್ಯಾ ಪ್ರಸನ್ನ, ವಿನೋದ ಅವರಿಂದ ಸಂಗೀತ ಕಾರ್ಯಕ್ರಮ, ಹಾಸ್ಯ ಕಲಾವಿದರಾದ ಮಿಮಿಕ್ರಿ ಗೋಪಿ, ಮಜಾ ಭಾರತ ಮತ್ತು ಗಿಚ್ಚಿ ಗಿಲಿಗಿಲಿ ಖ್ಯಾತಿಯ ಕಲಾವಿದರಾದ ರಾಘವೇಂದ್ರ, ಹುಲಿ ಕಾರ್ತಿಕ, ಚಿಲ್ಲರ್ ಮಂಜು, ಶಿವು ತಂಡದವರಿಂದ ಹಾಸ್ಯ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಅ.1ರಂದು ಸಿಂಧನೂರಿನಲ್ಲಿ ಯುವ ದಸರಾ ನಡೆಯಲಿದ್ದು, ಹಿನ್ನೆಲೆ ಗಾಯಕ ರಾಜೇಶ ಕೃಷ್ಣನ್ ಮತ್ತು ಅವರ ತಂಡದವರು ಆಗಮಿಸಲಿದ್ದಾರೆ. ಖ್ಯಾತ ನಿರೂಪಕಿ ಅನುಶ್ರೀ ಮತ್ತಿತರ ಕಲಾವಿದರು ಬರುತ್ತಿರುವುದು ಸಾರ್ವಜನಿಕರಲ್ಲಿ ಕುತೂಹಲ ಕೆರಳಿಸಿದೆ.
ಒಟ್ಟಾರೆ ದಸರಾ ಹಬ್ಬದ ಮಹತ್ವ ಸಾರಲು ಶಾಸಕ ಹಂಪನಗೌಡ ಬಾದರ್ಲಿ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು ನಿಕಟ ಪೂರ್ವ ಜಾನಪದ ಅಕಾಡೆಮಿಯ ಸದಸ್ಯ ನಾರಾಯಣಪ್ಪ ಮಾಡ ಸಿರವಾರ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.