ADVERTISEMENT

ಸಿಂಧನೂರು: ಏಳುರಾಗಿ ಕ್ಯಾಂಪ್ ರಸ್ತೆ ಸಂಪೂರ್ಣ ಹಾಳು

ಒಂದು ವಾರದಿಂದ ವಿದ್ಯಾರ್ಥಿಗಳು ಶಾಲೆಗೆ ಗೈರು

ಡಿ.ಎಚ್.ಕಂಬಳಿ
Published 30 ಆಗಸ್ಟ್ 2025, 5:32 IST
Last Updated 30 ಆಗಸ್ಟ್ 2025, 5:32 IST
ಸಿಂಧನೂರು–ಮಸ್ಕಿ ಮುಖ್ಯರಸ್ತೆಯಿಂದ ಏಳುರಾಗಿ ಕ್ಯಾಂಪ್‌ಗೆ ಕೂಡುವ ರಸ್ತೆಯ ಅವಸ್ಥೆ
ಸಿಂಧನೂರು–ಮಸ್ಕಿ ಮುಖ್ಯರಸ್ತೆಯಿಂದ ಏಳುರಾಗಿ ಕ್ಯಾಂಪ್‌ಗೆ ಕೂಡುವ ರಸ್ತೆಯ ಅವಸ್ಥೆ   

ಸಿಂಧನೂರು: ಇಲ್ಲಿಗೆ ಒಂದು ಕಿ.ಮೀ ಅಂತರದಲ್ಲಿರುವ ಏಳುರಾಗಿ ಕ್ಯಾಂಪ್ ಕಳೆದ 20 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಹೊಸ ಬಡಾವಣೆ. ನಗರಸಭೆಯ 31ನೇ ವಾರ್ಡ್ ವ್ಯಾಪ್ತಿಗೆ ಒಳಪಡಿತ್ತದೆ. ಸರ್ಕಾರವೇ ನಿವೇಶನ ನೀಡಿ ಬಡವರಿಗೆ ಆಶ್ರಯ ಕಲ್ಪಿಸಿ ರಸ್ತೆ ನಿರ್ಮಾಣದ ಕಾರ್ಯವನ್ನು ಮಾತ್ರ ಮರೆತು ಬಿಟ್ಟಿದೆ.

15 ದಿನದಿಂದ ನಿರಂತರ ಮಳೆಯಾಗುತ್ತಿದ್ದು ಬಂಡಿಜಾಡು ರಸ್ತೆಯಲ್ಲಿ ನೀರುನಿಂತು ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಆಸ್ಪತ್ರೆಗೆ ಹೋಗುವ ರೋಗಿಗಳು ಸಿಂಧನೂರು ನಗರಕ್ಕೆ ವಿವಿಧ ಕೆಲಸಗಳಿಗೆ ತೆರಳುವ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಸ್ಥರು ರಸ್ತೆ ಸಮಸ್ಯೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಇಲ್ಲಿಯ ಜನರು ಹಲವಾರು ವರ್ಷಗಳಿಂದ ತಮ್ಮ ಕ್ಯಾಂಪ್‍ಗೆ ರಸ್ತೆ ನಿರ್ಮಿಸುವಂತೆ ನೂರಾರು ಬಾರಿ ನಗರಸಭೆ ಅಧ್ಯಕ್ಷರು, ಅಧಿಕಾರಿಗಳು ಮತ್ತು ಶಾಸಕರಿಗೆ ಮನವಿ ಮಾಡಿಕೊಂಡರೂ ಯಾರೂ ಸ್ಪಂದಿಸದ ಕಾರಣಕ್ಕೆ ಈಗ ಕ್ಯಾಂಪಿನಿಂದ ಸಿಂಧನೂರಿಗೆ ಬರುವುದನ್ನೇ ನಿಲ್ಲಿಸುವಂತಾಗಿದೆ. ಇಲ್ಲಿ ಮೂರು ಸಾವಿರ ಜನ ವಾಸವಾಗಿದ್ದು, ಹದಿನಾಲ್ಕು ನೂರು ಮತದಾರರು ಇದ್ದಾರೆ.

ADVERTISEMENT

‘ಐದು ಬಾರಿ ಶಾಸಕರಾಗಿರುವ ಹಂಪನಗೌಡ ಬಾದರ್ಲಿ ಮತ್ತು ಎರಡು ಬಾರಿ ಶಾಸಕರಾಗಿ, ಸಚಿವರಾಗಿ ಆಡಳಿತ ನಿರ್ವಹಿಸಿದ ವೆಂಕಟರಾವ್ ನಾಡಗೌಡರನ್ನು ಮಸ್ಕಿ ಮುಖ್ಯರಸ್ತೆಯಿಂದ ಕ್ಯಾಂಪ್‌ ವರೆಗೆ ರಸ್ತೆ ನಿರ್ಮಿಸುವಂತೆ ಪರಿ-ಪರಿಯಿಂದ ಕೇಳಿದ್ದೇವೆ. ಚುನಾವಣೆ ಬಂದಾಗ ರಸ್ತೆ ಸೌಕರ್ಯ ಕಲ್ಪಿಸಿಕೊಡುವುದಾಗಿ ಹೇಳುತ್ತಾರೆ. ನಂತರ ಅಲ್ಲಿ ಹೊಲಗಳಿದ್ದು, ಅವುಗಳ ಮಾಲೀಕರು ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡುವುದಿಲ್ಲ ಎಂದು ಸಬೂಬು ಹೇಳುತ್ತಾ ಕಾಲ ನೂಕಿದ್ದಾರೆ’ ಎಂದು ನಿವಾಸಿಗಳಾದ ನಿಂಗಪ್ಪ, ಮಹಿಬೂಬಸಾಬ್, ದುರಗಮ್ಮ, ಶಂಕ್ರಮ್ಮ, ಬಸವರಾಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುತ್ತಿಗೆ ಹಾಕುವ ಎಚ್ಚರಿಕೆ: ಹಲವಾರು ವರ್ಷಗಳಿಂದ ರಸ್ತೆ ಕಾರಣಕ್ಕಾಗಿ ತೀವ್ರತೊಂದರೆ ಅನುಭವಿಸುತ್ತಿರುವ ಈ ಬಡಾವಣೆಗೆ ರಸ್ತೆ ನಿರ್ಮಿಸಲು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಒಗ್ಗೂಡಿ ಅಲ್ಲಿಯ ನಿವಾಸಿಗಳೊಂದಿಗೆ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಚರ್ಚಿಸುತ್ತಿರುವುದಾಗಿ ಛಲವಾದಿ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನಬಸವ, ಮುಖಂಡರಾದ ಮೌನೇಶ ನಾಯಕ, ದುರುಗೇಶ, ಹುಲ್ಲೇಶ ಮತ್ತು ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಚಿಟ್ಟಿಬಾಬು ತಿಳಿಸಿದರು.

ಏಳುರಾಗಿ ಕ್ಯಾಂಪ್‌ನ ರಸ್ತೆ ಸಮಸ್ಯೆ ಗಂಭೀರವಾಗಿದ್ದು ಶಾಸಕರೊಂದಿಗೆ ಸಮಾಲೋಚಿಸಿ ಅದಷ್ಟು ಶೀಘ್ರ ರಸ್ತೆ ಸೌಕರ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು.
– ಮಂಜುಳಾ ಪ್ರಭುರಾಜ, ನಗರಸಭೆ ಅಧ್ಯಕ್ಷೆ
ರಸ್ತೆ ನಿರ್ಮಾಣಕ್ಕೆ ಭೂ ಮಾಲೀಕರಿಂದ ಅಡ್ಡಿಯಾಗಿತ್ತು. ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರಸ್ತೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು.
– ಹಂಪನಗೌಡ ಬಾದರ್ಲಿ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.