
ಸಿಂಧನೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಕೀಲ ಆರೋಗ್ಯ (ಎ.ರಾಜು) ಬಸಾಪುರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದಲಿತಪರ, ಪ್ರಗತಿಪರ ಮತ್ತು ರಾಜಕೀಯ ಪಕ್ಷಗಳ ಮುಖಂಡರು ಗುರುವಾರ ಶಿರಸ್ತೇದಾರ್ ಅಂಬಾದಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಆರೋಗ್ಯ ವಕೀಲ ಎಸ್‍ಸಿ, ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ಮೇಲ್ಜಾತಿಯವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ತಮ್ಮ ಸಂಬಂಧಿಕರ ಹೆಸರಿನಲ್ಲಿ ಮಾನಹಾನಿ ಆಗಿದೆಂದು ಬಿಂಬಿಸಿ, ಸಮಾಜ ಕಲ್ಯಾಣ ಇಲಾಖೆಯಿಂದ ಹಣ ಪಡೆದಿದ್ದಾರೆ. ಫೆ.18ರಂದು ಸುಳ್ಳು ಕೇಸ್ ದಾಖಲಿಸಿ 11 ಜನರ ಮೇಲೆ ಲಕ್ಷ್ಮಿ ತಿಪ್ಪಣ್ಣ ಅವರ ಹೆಸರು ಬಳಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಕುನ್ನಟಗಿ ಹೋಬಳಿಯ ಬಸ್ಸಾಪುರ ಸೀಮಾದ ಸ.ನಂ.51, ಹಿಸ್ಸಾ ನಂ.7 ಮತ್ತು 8ರಲ್ಲಿ ಸುನೀಲ್ ದೇಸಾಯಿ ಈಶಪ್ಪ ಅವರ 20 ಗುಂಟೆ, ಸತ್ಯರಾಣಿ ಬಾಲರಾಜು ಅವರ 20 ಗುಂಟೆ ಜಮೀನಿನಲ್ಲಿ ಅಕ್ರಮವಾಗಿ ಪ್ರವೇಶಿಸಿ ಅನಧಿಕೃತವಾಗಿ ಶೆಡ್, ಎಗ್ ರೈಸ್ ಬಂಡಿ ಹಾಗೂ ಮದ್ಯಪಾನ ಮಾರಾಟ ಮಾಡುತ್ತಿದ್ದಾರೆ. ಈ ಹೊಲದ ಆಸ್ತಿ ನ್ಯಾಯಾಲಯದಲ್ಲಿ ಇದ್ದರೂ ತನಗೆ ಸಂಬಂಧಿವಿಲ್ಲದ ವಿಷಯ ಮತ್ತು ಆಸ್ತಿಯಲ್ಲಿ ಗಲಾಟೆ ಮಾಡಿ ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಫೆ.18ರಂದು ದಾಖಲಾದ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ಮಾಡಬೇಕು. ಸುಳ್ಳುದೂರು ನೀಡಿದವರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕ್ರಿಮಿನಲ್ ಹಿನ್ನಲೆ ಹೊಂದಿರುವ ಆರೋಗ್ಯ ವಕೀಲ ಮತ್ತು ಈತನ ಸಂಬಂಧಿಕರ ಮೇಲೆ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಿ ಗಡೀಪಾರು ಮಾಡಿ ಹಣವನ್ನು ಪುನರ್ ಭರಿಸಿಕೊಳ್ಳಬೇಕು ಸುಳ್ಳು ಪ್ರಕರಣಗಳನ್ನು ದಾಖಲಿಸಲು ಪ್ರಚೋದನೆ ಮಾಡುತ್ತಿರುವ ಆರೋಗ್ಯ ಅವರ ವಕೀಲ ವೃತ್ತಿಯ ಪರವಾನಿಗೆ ರದ್ದುಪಡಿಸಬೇಕು ಹಾಗೂ ಸಿಡಿಆರ್ ತೆಗೆಯಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಯಮನಪ್ಪ ಬಿಎಸ್‍ಎನ್‍ಎಲ್, ರಾಮಣ್ಣ ಸಾಸಲಮರಿ, ಅಮರೇಶ ಗಿರಿಜಾಲಿ, ಬಸವರಾಜ ಕರ್ನಿ, ಸುರೇಶ ಗೊರೇಬಾಳ, ಹುಸೇನಪ್ಪ ಪೂಜಾರಿ, ಯಲ್ಲಪ್ಪ ಯದ್ದಲದೊಡ್ಡಿ, ಸುರೇಶ ಎಲೆಕೂಡ್ಲಿಗಿ, ವೆಂಕಟೇಶ, ಹಸೇನಪ್ಪ ಸೂಲಂಗಿ, ಶಿವಗ್ಯಾನಪ್ಪ ಪಾಂಡುರಂಗ ಕ್ಯಾಂಪ್, ನಿರುಪಾದೆಪ್ಪ ಉಪ್ಪಲದೊಡ್ಡಿ, ಪುಷ್ಪರಾಜ್ ಬೆನಕನಾಳ, ಕಂಠೆಪ್ಪ ಬಸಾಪುರ, ಸಂಗಮೇಶ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.