ರಾಯಚೂರು: ಅಘೋಷಿತ ಕೊಳೆಗೇರಿ ಪ್ರದೇಶಗಳನ್ನು ಘೋಷಣೆ ಮಾಡಬೇಕು. ಈಗಾಗಲೇ ಘೋಷಿಸಿರುವ ಕೊಳೆಗೇರಿ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ಸ್ಲಂ ಜನರ ಕ್ರಿಯಾ ವೇದಿಕೆ ಹಾಗೂ ದಲಿತ ಸಮರಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು.
ಜಿಲ್ಲೆಯ ಮಾನ್ವಿ ಪಟ್ಟಣದ ಅಂಬೇಡ್ಕರ್ ನಗರದ ಸ್ಲಂ ಸರ್ವೆ ನಂಬರ್ 613, 617 / 1, ಲಿಂಗಸೂಗೂರು ತಾಲ್ಲೂಕಿನ ವಾಡ್ ನಂಬರ್ 15 ರ ಪಿಂಚಣಿಪುರದಲ್ಲಿ ಅನೇಕ ಬಡ, ಹಿಂದುಳಿದ ಪರಿಶಿಷ್ಟರು ವಾಸವಾಗಿದ್ದು ಸ್ಲಂ ಪ್ರದೇಶ ಎಂದು ಘೋಷಣೆ ಮಾಡಿದ್ದಾರೆ. ಆದರೆ ಮೂಲಸೌಕರ್ಯ ಕಲ್ಪಿಸಿಲ್ಲ.
ಲಿಂಗಸೂಗೂರು ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಂಗಳಮುಖಿಯರು ಹೆಚ್‌ಐವಿ ಸೋಂಕಿತರು, ವಿಧವೆಯರು, ದೇವದಾಸಿಯರು, ಬೀದಿ ವ್ಯಾಪಾರಿಗಳು, ನಿರ್ಗತಿಕರು, ಅಂಗವಿಕಲರು ವಾಸವಾಗಿದ್ದು ವಿಶೇಷ ವರ್ಗದ ಅಡಿಯಲ್ಲಿ ಭೂಮಿ ಮಂಜೂರು ಮಾಡಿ ವಸತಿಗಾಗಿ ಕಾಯ್ದಿರಿಸಿ ಬಗ್ಗೆ ಸೌಲಭ್ಯ ಕೇಳಲು ಹೋದರೆ ತಹಶೀಲ್ದಾರರು ನಿಂದಿಸಿದ್ದಾರೆ. ಕೂಡಲೇ ತಹಶೀಲ್ದಾರರ ವಿರುದ್ಧ ಕ್ರಮಕೈಗೊಳ್ಳಬೇಕು ಮತ್ತು ವಿಶೇಷ ವರ್ಗದಲ್ಲಿ ಸಿಗಬೇಕಾದ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿಯು ಖುದ್ದಾಗಿ ಮನವಿ ಸ್ವೀಕರಿಸಬೇಕು. ಸಂಕಷ್ಟದಲ್ಲಿರುವ ಜನರ ಅಳಲು ಆಲಿಸಬೇಕು ಎಂದು ಪ್ರತಿಭಟನಾಕಾರರು ಸಂಜೆವರೆಗೂ ಜಿಲ್ಲಾಧಿಕಾರಿ ಆವರಣ ಪ್ರವೇಶದ್ವಾರದ ಎದುರು ಧರಣಿ ನಡೆಸಿದರು. ಸ್ಥಳದಲ್ಲೇ ಊಟ ಮಾಡಿ, ಧರಣಿ ಮುಂದುವರಿಸಿದ್ದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಎಂ.ಆರ್.ಭೇರಿ, ಅಂಬಣ್ಣ ಅರೋಲಿ, ಜನಾರ್ದನ ಹಳ್ಳಿಬೆಂಚಿ, ಕೆ.ಪಿ.ಅನಿಲಕುಮಾರ, ರಾಜಪ್ಪ ಸಿರವಾರ, ಹೇಮರಾಜ ಅಸ್ಕಿಹಾಳ ಮತ್ತಿತರರು ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.