ADVERTISEMENT

ರಾಯಚೂರು | ಉತ್ತಮ ಬೆಳೆಗೆ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಿ: ಎ.ಆರ್ ಕುರುಬರ

ಕೃಷಿ ವಿಸ್ತರಣಾ ನಿರ್ದೇಶಕ ಎ.ಆರ್ ಕುರುಬರ ಮನವಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 6:47 IST
Last Updated 8 ಡಿಸೆಂಬರ್ 2025, 6:47 IST
ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎ.ಆರ್ ಕುರುಬರ ಅವರು ಮಣ್ಣಿನ ಫಲವತ್ತತೆ ಹೆಚ್ಚಿಸಲು ಕೈಗೊಳ್ಳಬೇಕಿರುವ ಅಂಶಗಳ ಮಾಹಿತಿ ಪಡೆದರು. ಕೆ.ನಾರಾಯಣರಾವ್, ಅಮರನಾಥ ರೆಡ್ಡಿ, ಶ್ರೀವಾಣಿ ಜಿ.ಎನ್, ಇಂ.ವೀಣಾ ಉಪಸ್ಥಿತರಿದ್ದರು
ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎ.ಆರ್ ಕುರುಬರ ಅವರು ಮಣ್ಣಿನ ಫಲವತ್ತತೆ ಹೆಚ್ಚಿಸಲು ಕೈಗೊಳ್ಳಬೇಕಿರುವ ಅಂಶಗಳ ಮಾಹಿತಿ ಪಡೆದರು. ಕೆ.ನಾರಾಯಣರಾವ್, ಅಮರನಾಥ ರೆಡ್ಡಿ, ಶ್ರೀವಾಣಿ ಜಿ.ಎನ್, ಇಂ.ವೀಣಾ ಉಪಸ್ಥಿತರಿದ್ದರು   

ರಾಯಚೂರು: ‘ಉತ್ತಮ ಬೆಳೆಗೆ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಬೇಕಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎ.ಆರ್ ಕುರುಬರ ಮನವಿ ಮಾಡಿದರು.

ಇಲ್ಲಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಮಹಾವಿದ್ಯಾಲಯದ ಮಣ್ಣು ವಿಜ್ಞಾನ ವಿಭಾಗ, ಕೃಷಿ ಇಲಾಖೆ, ಇಫ್ಕೋ ಸಂಸ್ಥೆ, ಆರ್.ಸಿ.ಎಫ್ ಹಾಗೂ ಕೋರಮಂಡಲ ಇಂಟರ್‌ ನ್ಯಾಷನಲ್ ಲಿಮಿಟೆಡ್ ಆಶ್ರಯದಲ್ಲಿ ಈಚೆಗೆ ಏರ್ಪಡಿಸಿದ್ದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಣ್ಣು ಸಸ್ಯಗಳಿಗೆ ಬೇಕಾದ ಪೋಷಕಾಂಶಗಳನ್ನು ಒದಗಿಸುವ ಜೀವ ಸತ್ವಗಾಗಿದೆ. ಸಕಲ ಜೀವಿಗಳಿಗೆ ಆಧಾರವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಮಣ್ಣಿನ ಸಂರಕ್ಷಣೆಯ ಹೊಣೆ ವಹಿಸಿಕೊಳ್ಳಬೇಕು’ ಎಂದರು.

ADVERTISEMENT

‘ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಹೆಚ್ಚಿಸಲು ರೈತರು ವಿವಿಧ ಕ್ರಮಗಳನ್ನು ಅನುಸರಿಸಬೇಕು, ಪ್ರತಿ ಮೂರು ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸಿ ಅದಕ್ಕನುಗುಣವಾಗಿ ರಸಗೊಬ್ಬರಗಳನ್ನು ಒದಗಿಸಬೇಕು.ಹಿರಿಯರಿಂದ ಪಡೆದ ಫಲವತ್ತಾದ ಭೂಮಿಯನ್ನು ಮುಂದಿನ ಪೀಳಿಗೆಗೆ ಆರೋಗ್ಯಯುತ ಬಳುವಳಿಯಾಗಿ ನೀಡಬೇಕು’ ಎಂದು ಸಲಹೆ ನೀಡಿದರು.

‘ರೈತರಿಗೆ ವಿವಿಧ ಸಾವಯವ ಗೊಬ್ಬರಗಳು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ತಂತ್ರಜ್ಞಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸುತ್ತಿರುವ ಕೃಷಿ ವಿಜ್ಞಾನ ಕೇಂದ್ರದ ಕಾರ್ಯ ಮಹತ್ವದ್ದಾಗಿದೆ‘ ಎಂದು ಹೇಳಿದರು.

ವಿಸ್ತರಣಾ ನಿರ್ದೇಶಕರು ಮಣ್ಣಿನ ಸಂರಕ್ಷಣೆಯ ಬಗ್ಗೆ ರೈತರಿಗೆ, ವಿಜ್ಞಾನಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಕೋರಮಂಡಲ್ ಲಿಮಿಟೆಡ್‌ನ ವಲಯ ಅಧಿಕಾರಿ ಅಮರನಾಥ ರೆಡ್ಡಿ, ಆರ್.ಸಿ.ಎಫ್‍ನ ವಲಯ ಅಧಿಕಾರಿ ಪ್ರವೀಣ.ಜಿ.ಡಿ, ಇಫ್ಕೋ ಸಂಸ್ಥೆಯ ಸಚಿನ್ ಎಸ್‌.ಎಚ್. ಮಾತನಾಡಿದರು. ಕೃಷಿ ಮಹಾವಿದ್ಯಾಲಯದ ಡೀನ್ ಕೆ. ನಾರಾಯಣರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜ್ಞಾನಿ ಶ್ರೀವಾಣಿ ಜಿ.ಎನ್ ಸ್ವಾಗತಿಸಿದರು. ಮಲ್ಲರೆಡ್ಡಿ ನಿರೂಪಿಸಿದರು ಹಾಗೂ ಇಂ.ವೀಣಾ ವಂದಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಹಾಗೂ ಮಣ್ಣು ವಿಜ್ಞಾನ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು, 150 ರೈತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.