ADVERTISEMENT

ಸೊನ್ನ ಗ್ರಾಮದಲ್ಲೊಂದು ಹೈ-ಟೆಕ್ ಅರಿವು ಕೇಂದ್ರ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 8:00 IST
Last Updated 6 ನವೆಂಬರ್ 2025, 8:00 IST
<div class="paragraphs"><p>ಜೇವರ್ಗಿಯ ಸೊನ್ನ ಗ್ರಾಮದ ಅರಿವು ಕೇಂದ್ರದಲ್ಲಿ ಅಕ್ಷರ ಅವಿಷ್ಕಾರ ಯೋಜನೆಯ ಕಲಿಕಾಸರೆ ಪುಸ್ತಕಗಳ ಅಧ್ಯಯನದಲ್ಲಿ ತೊಡಗಿರುವ ಮಕ್ಕಳು</p></div>

ಜೇವರ್ಗಿಯ ಸೊನ್ನ ಗ್ರಾಮದ ಅರಿವು ಕೇಂದ್ರದಲ್ಲಿ ಅಕ್ಷರ ಅವಿಷ್ಕಾರ ಯೋಜನೆಯ ಕಲಿಕಾಸರೆ ಪುಸ್ತಕಗಳ ಅಧ್ಯಯನದಲ್ಲಿ ತೊಡಗಿರುವ ಮಕ್ಕಳು

   

ಜೇವರ್ಗಿ: ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳ ಇಚ್ಛಾಶಕ್ತಿಯಿಂದ ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಗ್ರಂಥಾಲಯಗಳು ತಲೆ ಎತ್ತಿ ನಿಂತಿವೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ತಂತ್ರಜ್ಞಾನವನ್ನು ಮುಟ್ಟಿಸುವ ದೃಷ್ಟಿಯಿಂದ ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಡಿಜಿಟಲ್ ಟಚ್ ನೀಡಲಾಗುತ್ತಿದೆ.

ಹೌದು, ತಾಲ್ಲೂಕಿನ ಸೊನ್ನ ಗ್ರಾಮ ಪಂಚಾಯಿತಿ ಕೇಂದ್ರದ ಅಧೀನದಲ್ಲಿರುವ ಅರಿವು ಕೇಂದ್ರ ಡಿಜಿಟಲ್ ಟಚ್‌ ಪಡೆಯುವ ಮೂಲಕ ಜಿಲ್ಲೆಯ ಪ್ರಥಮ ಮಾದರಿ ಡಿಜಿಟಲ್ ಗ್ರಂಥಾಲಯವಾಗಿ ಹೊರಹೊಮ್ಮಿದೆ. ಗ್ರಾಮೀಣ ಭಾಗದ ಗ್ರಂಥಾಲಯ ಎಂದರೆ ಹಳೆ ಕಟ್ಟಡ, ಧೂಳು ತಿಂದ ಪುಸ್ತಕಗಳು ಇರುತ್ತವೆ ಎನ್ನುವ ಭಾವನೆ ಎಲ್ಲರಲ್ಲೂ ಇರುತ್ತೆ. ಆದರೆ, ಅಧಿಕಾರಿಗಳ ಹಾಗೂ ಮೇಲ್ವಿಚಾರಕನ ಆಸಕ್ತಿಯಿಂದ ಅಂತಹ ಭಾವನೆ ದೂರವಾಗಿದೆ.

ADVERTISEMENT

ಗ್ರಾಮೀಣ ಭಾಗದಲ್ಲಿ ಸಾಕಷ್ಟು ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಸಾಮಾನ್ಯ. ಆದರೆ, ಪರೀಕ್ಷೆಗಳಿಗೆ ತಯಾರಿ ನಡೆಸಲು ಬೇಕಾದ ಪುಸ್ತಕಗಳು, ಗ್ರಂಥಾಲಯಗಳ ಲಭ್ಯತೆ ಮಾತ್ರ ಮರೀಚಿಕೆಯಾಗಿರುತ್ತದೆ. ಆದರೆ, ಸೊನ್ನ ಗ್ರಾಮ ಪಂಚಾಯಿತಿ ಸುಸಜ್ಜಿತವಾದ ಗ್ರಂಥಾಲಯ ತೆರೆದು ಪರೀಕ್ಷಾರ್ಥಿಗಳಿಗೆ ಬೇಕಾಗುವ ಪುಸ್ತಕಗಳನ್ನು ಒದಗಿಸುತ್ತಿದೆ. ಇಲ್ಲಿನ ಅರಿವು ಕೇಂದ್ರ ವಿದ್ಯಾ ಕೇಂದ್ರವಾಗಿ, ಬಡ ವಿದ್ಯಾರ್ಥಿಗಳ ದಾರಿದೀಪವಾಗಿದೆ.

ಈ ಗ್ರಂಥಾಲಯದಲ್ಲಿ ಕಂಪ್ಯೂಟರ್ ಮತ್ತು ಅಂತರ್ಜಾಲ ಸೌಲಭ್ಯಗಳಿದ್ದು, ಇ ಲೈಬ್ರರಿ ಮೂಲಕ ಪುಸ್ತಕಗಳನ್ನು ಪಡೆದುಕೊಳ್ಳಬಹುದು. ಇಲ್ಲಿರುವ ಎರಡು ಕಂಪ್ಯೂಟರ್‌ಗಳಲ್ಲಿ ಇ ಲೈಬ್ರರಿ ಕೂಡ ಅಳವಡಿಕೆ ಮಾಡಲಾಗಿದ್ದು, ಪಿಡಿಒ, ಬ್ಯಾಂಕ್, ಕಾನ್‌ಸ್ಟೆಬಲ್‌, ಐಪಿಎಸ್, ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಬೇಕಾಗುವ ಪುಸ್ತಕಗಳು ಸಿಗುವಂತೆ ಮಾಡಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳು ಯಾವುದಾದರೂ ಸ್ಪರ್ಧಾತ್ಮಕ ಪುಸ್ತಕಗಳು ಬೇಕು ಎಂದರೆ ತರಿಸಿಕೊಡುವ ಕೆಲಸವನ್ನು ಮೇಲ್ವೀಚಾರಕ ಮಾಡುತ್ತಿದ್ದಾರೆ. ಹೀಗಾಗಿ ಸೊನ್ನ ಗ್ರಾಮ ಒಂದೇ ಅಲ್ಲದೇ ಸುತ್ತಮುತ್ತಲಿನ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇದು ಉಪಯುಕ್ತವಾಗಿದೆ.

ಎಲ್ಲಾ ಹವ್ಯಾಸಗಳಿಗಿಂತ ವ್ಯಾಸಂಗದ ಹವ್ಯಾಸ ಶ್ರೇಷ್ಟವಾದದ್ದು, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ನೀವು ಬಯಸಿದ್ದು ನಿಮಗೆ ಸಿಗುತ್ತದೆ ಎಂಬ ಉಕ್ತಿಗಳ ಗೋಡೆ ಬರಹಗಳು ಗಮನಾರ್ಹವಾಗಿವೆ. ಆಕರ್ಷಕ ಬಣ್ಣದ ಚಿತ್ತಾರಗಳು ಜ್ಞಾನಾರ್ಜನೆ ಮಹತ್ವವನ್ನು ಸಾರುವಂತಿವೆ.

ದುಂಡು ಮೇಜಿನ ಸುತ್ತ ಕುರ್ಚಿಗಳನ್ನು ಸಜ್ಜುಗೊಳಿಸಲಾಗಿದೆ. ತ್ವರಿತ ಮಾಹಿತಿ ಪಡೆಯಲು ಅನುಕೂಲವಾಗುವಂತೆ ಎರಡು ಕಂಪ್ಯೂಟರ್‌ಗಳನ್ನು ಸ್ಥಾಪಿಸಲಾಗಿದೆ. ನಿಯತಕಾಲಿಕೆಗಳ ಜತೆಯಲ್ಲಿ ವಿವಿಧ ಪುಸ್ತಕಗಳ ಭಂಡಾರವೇ ಇದೆ. ಸದ್ಯ 4,500 ಪುಸ್ತಕಗಳು ಗ್ರಂಥಾಲಯದಲ್ಲಿವೆ. ಬೇಸಿಗೆ ದಿನಗಳಲ್ಲಿ ಓದುಗರಿಗೆ ತೊಂದರೆಯಾಗದಂತೆ ಎಸಿ ವ್ಯವಸ್ಥೆ ಮಾಡಲಾಗಿದೆ.

ಸೊನ್ನ ಅರಿವು ಕೇಂದ್ರಕ್ಕೆ 2023-24 ನೇ ಸಾಲಿನಲ್ಲಿ ₹3.5 ಲಕ್ಷ, 2024-25ನೇ ಸಾಲಿನಲ್ಲಿ ₹2.5 ಲಕ್ಷ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಪಡಿಸಲಾಗಿದ್ದು, ಜಿಲ್ಲೆಯಲ್ಲಿ ಇದು ಮಾದರಿಯಾಗಿದೆ
ರವಿಚಂದ್ರರೆಡ್ಡಿ, ಇಒ ತಾಪಂ ಜೇವರ್ಗಿ
ಬೇಡಿಕೆಯಂತೆ ಪುಸ್ತಕಗಳನ್ನು ಖರೀದಿಸಲು ಚಿಂತನೆ ನಡೆದಿದೆ. ಒಂದು ವರ್ಷದ ದಿನಪತ್ರಿಕೆಗಳ ಬಿಲ್, ಸಾರಿಗೆ ವೆಚ್ಚ ನೀಡಿಲ್ಲ. ಇದರಿಂದ ಸಮಸ್ಯೆ ಉಂಟಾಗಿದ್ದು, ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು
ಮಲ್ಲಿಕಾರ್ಜುನ ಬಿರಾದಾರ, ಮೇಲ್ವಿಚಾರಕ ಅರಿವು ಕೇಂದ್ರ ಸೊನ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.