ADVERTISEMENT

ನೆರೆ ರಾಜ್ಯದಿಂದ ಬರುವವರ ಮಾಹಿತಿ ಕೊಡಿ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಕೋರಿಕೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2020, 15:07 IST
Last Updated 11 ಏಪ್ರಿಲ್ 2020, 15:07 IST
ಡಾ.ಸಿ.ಬಿ.ವೇದಮೂರ್ತಿ
ಡಾ.ಸಿ.ಬಿ.ವೇದಮೂರ್ತಿ   

ರಾಯಚೂರು: ಇದುವರೆಗೂ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಯಶಸ್ವಿಯಾಗಿದ್ದು, ಇದಕ್ಕೆ ಎಲ್ಲರೂ ಕಾರಣರು. ನೆರೆ ರಾಜ್ಯಗಳ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚಿರುವುದರಿಂದ ಅಲ್ಲಿಂದ ಕೆಲವರು ರಾತ್ರಿ ಕಣ್ತೆಪ್ಪಿಸಿ ತಮ್ಮ ಮನೆಗಳಿಗೆ ಬಂದು ಸೇರುತ್ತಿದ್ದು, ಕೂಡಲೇ ಇಂಥವರ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಕೋರಿದ್ದಾರೆ.

ಮುಂದಿನ ದಿನಗಳಲ್ಲೂಕೊರೊನಾ ಸೋಂಕು ಹರಡುವುದನ್ನು ಎಲ್ಲರೂ ತಡೆಗಟ್ಟಬೇಕಿದೆ. ಹೊರರಾಜ್ಯದಿಂದ ಬರುವವರಿಗೆ ಸೂಕ್ತ ತಪಾಸಣೆ ಹಾಗೂ ನಿಗಾ ಇರುವ ವ್ಯವಸ್ಥೆ ಮಾಡಲಾಗುವುದು. ಕರ್ನೂಲ್‌ನಲ್ಲಿ 82 ಹಾಗೂ ಗದ್ವಾಲ್‌ನಲ್ಲಿ 22 ಕೊರೊನಾ ಸೋಂಕಿತರು ಕಂಡು ಬಂದಿದ್ದಾರೆ. ಹೀಗಾಗಿ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಯಾಪಲದಿನ್ನಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿರುವ ಬೂರ್ದಿಪಾಡ, ಸರ್ಜಾಪುರ, ಯಾಪಲದಿನ್ನಿ, ವಡ್ಲಂದೊಡ್ಡಿ, ಮಂಡಲಗೇರಾ, ನೆಟ್ಟಂಪಾಡು, ಪಾವಗುಂಟಾ, ಇರ್ಚೆಡ್‌, ಯರಗೇರಾ ಪೊಲೀಸ್‌ ಠಾಣೆ ವ್ಯಾಪ್ತಿಯ ಕಟಕನೂರು, ಹನುಮಾಪುರ, ಉಂಡ್ರಾಳದೊಡ್ಡಿ, ಬಾಪೂರು, ಇಡಪನೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಎಲೆಬಿಚ್ಚಾಲಿ, ತುಂಗಭದ್ರಾ, ಚಿಕ್ಕಮಂಚಾಲಿ, ಗುಂಡ್ರವೇಲಿ, ಮಲಕಾಪುರ, ಬುಳ್ಳಾಪುರ, ಗಂಗಾವರ, ತಲಮಾರಿ, ಕೊತ್ತದೊಡ್ಡಿ, ಮೀರಾಪುರ ಗ್ರಾಮಗಳ ಕಾಲುದಾರಿ ಹಾಗೂ ಹೊಲಗಳಲ್ಲಿ ನಡೆದುಕೊಂಡು ಬಂದು ಪೊಲೀಸರ ಕಣ್ತೆಪ್ಪಿಸಿ ಬರುತ್ತಿದ್ದಾರೆ ಎನ್ನುವ ಮಾಹಿತಿ ಬಂದಿದೆ ಎಂದು ಹೇಳಿದ್ದಾರೆ.

ADVERTISEMENT

ಪೊಲೀಸರೊಂದಿಗೆ ಸಹಕರಿಸಿ: ಪೊಲೀಸರು ಹಗಲುರಾತ್ರಿ ಶ್ರಮಿಸುತ್ತಿದ್ದಾರೆ. ಇದೇ ವೇಳೆ ಆರೋಗ್ಯ ಇಲಾಖೆಯ ಸಿಬ್ಬಂದಿಯ ಶ್ರಮ ಬಹಳಷ್ಟಿದ್ದು, ಈ ಮೂಲಕ ಅವರನ್ನು ಅಭಿನಂದಿಸುತ್ತೇನೆ. ಅನಗತ್ಯ ಯಾರೂ ಹೊರಬರಬಾರದು. ಇದುವರೆಗೂ ಜಿಲ್ಲೆಯಲ್ಲಿ 2,420 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.

ಬೈಕ್‌ ಜಪ್ತಿ ಮಾಡಿಕೊಂಡು ಪೊಲೀಸರು ಖುಷಿಯಿಂದ ಇದ್ದಾರೆ ಎಂದು ಭಾವಿಸಬಾರದು. ಬಿಸಿಲಿನಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು; ಕಷ್ಟ ಪಡುವುದನ್ನು ಗಮನಿಸಬೇಕು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲರೂ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಪೊಲೀಸರು ಸೌಜನ್ಯದಿಂದ ವರ್ತಿಸುತ್ತಾರೆ. ಕೆಲವು ಬಾರಿ ಧಾವಂತದಲ್ಲಿ ಪೊಲೀಸರಿಂದ ವೈದ್ಯರಿಗೆ, ಮಾಧ್ಯಮದವರಿಗೆ ಹಾಗೂ ಸರ್ಕಾರಿ ನೌಕರರಿಗೆ ತೊಂದರೆ ಆಗಿರಬಹುದು. ಹೆಚ್ಚು ಜನರನ್ನು ನಿಯಂತ್ರಿಸುವ ಧಾವಂತದಲ್ಲಿ ಇದಾಗಿದೆ ಎಂದು ತಿಳಿದುಕೊಳ್ಳಿ, ವಿಷಯ ದೊಡ್ಡದು ಮಾಡಬಾರದು ಎಂದು ಇದೇ ವೇಳೆ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.