ADVERTISEMENT

ಕೊರೊನಾ ಉಪದ್ರವ ಪರಿಹಾರವಾಗಲಿ: ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ

ಭಕ್ತಿಭಾವದೊಂದಿಗೆ ಶರವನ್ನವರಾತ್ರಿ ಸಂಪನ್ನ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 14:20 IST
Last Updated 26 ಅಕ್ಟೋಬರ್ 2020, 14:20 IST
ಶರವನ್ನವರಾತ್ರಿ ನಿಮಿತ್ತ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸಂಸ್ಥಾನದ ಮೂಲ ಪ್ರತಿಮೆಗಳಿಗೆ ವಿಶೇಷ ಪೂಜೆಗಳನ್ನು ಭಾನುವಾರ ನೆರವೇರಿಸಿದರು
ಶರವನ್ನವರಾತ್ರಿ ನಿಮಿತ್ತ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸಂಸ್ಥಾನದ ಮೂಲ ಪ್ರತಿಮೆಗಳಿಗೆ ವಿಶೇಷ ಪೂಜೆಗಳನ್ನು ಭಾನುವಾರ ನೆರವೇರಿಸಿದರು   

ರಾಯಚೂರು: ವಿಶ್ವದೆಲ್ಲೆಡೆ ಕೊರೊನಾ ಉಪದ್ರವ ಪರಿಹಾರವಾಗಲಿ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.

ಶರವನ್ನವರಾತ್ರಿ ಸಂಪನ್ನ ಹಾಗೂ ವಿಜಯದಶಮಿ ದಿನದಂದು ಭಾನುವಾರ, ಮಠದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಅನುಗ್ರಹ ಸಂದೇಶ ನೀಡಿದರು.

ಎಲ್ಲ ಜನರು ಸುಖಿಗಳಾಗಿ ಧರ್ಮ ಹಾಗೂ ಭಕ್ತಿ ಮಾರ್ಗದಲ್ಲಿ ನಡೆಯುವಂತಾಗಲಿ, ವಿಶೇಷವಾಗಿ ಭಗವಂತರು ಸಕಲ ಸಂತೋಷ, ಸೌಹಾರ್ದತೆ ಹಾಗೂ ಎಲ್ಲ ರೀತಿಯ ಸಮೃದ್ಧಿಯನ್ನು ಅನುಗ್ರಹಿಸಲಿ ಎಂಬುದಾಗಿ ಪ್ರಾರ್ಥಿಸುತ್ತೇವೆ ಎಂದರು.

ADVERTISEMENT

ಎಲ್ಲ ಭಕ್ತರಿಗೂ ಆನ್‌ಲೈನ್‌ ಮೂಲಕವೇ ರಾಘವೇಂದ್ರ ಸ್ವಾಮಿಗಳ ಮಂತ್ರಾಕ್ಷತೆ ನೀಡಲಾಗುತ್ತಿದೆ. ಎಲ್ಲರನ್ನು ರಾಯರು ಅನುಗ್ರಹಿಸಲಿ ಎಂದು ಕೋರಿದರು.

ಇದಕ್ಕೂ ಮೊದಲು ವಿಜಯ ದಶಮಿ ಅಂಗವಾಗಿ ಸಂಸ್ಥಾನದ ಮೂಲರಾಮದೇವರ ಮೂರ್ತಿಗಳಿಗೆ ಪೂಜೆ ನೆರವೇರಿಸಿದರು. ಈ ಸುಸಂದರ್ಭ ದಿನದಂದು 6ನೇ ತಂಡದ ಒಂಭತ್ತು ವಿದ್ಯಾರ್ಥಿಗಳಿಗೆ ರಾಯರ ಸನ್ನಿಧಾನದಲ್ಲಿ ‘ಸುಧಾಪಾಠ’ವನ್ನು ಆರಂಭಿಸಿದರು.

ಮಂಚಾಲಮ್ಮದೇವಿಗೆ ಪೂಜೆ: ಮಹಾನವರಾತ್ರಿ ನಿಮಿತ್ತ ಮಂತ್ರಾಲಯ ಕ್ಷೇತ್ರದ ದೇವತೆ ಮಂಚಾಲಮ್ಮನಿಗೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂಧ್ರ ತೀರ್ಥರು ಭಾನುವಾರ, ವಿಶೇಷ ಪೂಜೆ ನೆರವೇರಿಸಿದರು.

ಮಂಗಳವಾದ್ಯಗಳೊಂದಿಗೆ ಪುಷ್ಪಮಾಲೆ ಸಮರ್ಪಣೆ, ಮಹಾಮಂಗಳಾರತಿ ಹಾಗೂ ಅಕ್ಷತೆ ಪೂಜೆ ವಿಶೇಷವಾಗಿತ್ತು. ಮಠದ ಪಂಡಿತರು, ಸಿಬ್ಬಂದಿ ಹಾಗೂ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.