ADVERTISEMENT

ಮಂತ್ರಾಲಯ: ರಾಯರ ಮಧ್ಯಾರಾಧನೆ ಸಂಭ್ರಮ

ರಾಯರಿಗೆ ಶ್ರೀನಿವಾಸ ದೇವರ ಶೇಷವಸ್ತ್ರ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 20:00 IST
Last Updated 17 ಆಗಸ್ಟ್ 2019, 20:00 IST
ರಾಯರ ಮಧ್ಯಾರಾಧನೆ ನಿಮಿತ್ತ ತಿರುಪತಿ ತಿರುಮಲದಿಂದ ಬಂದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಬರಮಾಡಿಕೊಂಡರುಪ್ರಜಾವಾಣಿ ಚಿತ್ರ: ಶ್ರೀನಿವಾಸ ಇನಾಮದಾರ್‌
ರಾಯರ ಮಧ್ಯಾರಾಧನೆ ನಿಮಿತ್ತ ತಿರುಪತಿ ತಿರುಮಲದಿಂದ ಬಂದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಬರಮಾಡಿಕೊಂಡರುಪ್ರಜಾವಾಣಿ ಚಿತ್ರ: ಶ್ರೀನಿವಾಸ ಇನಾಮದಾರ್‌   

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ ಅಂಗವಾಗಿ ಶನಿವಾರ ಮಧ್ಯಾರಾಧನೆಯ ವಿಶೇಷ ಪೂಜಾ ವಿಧಿ ವಿಧಾನಗಳು ನೆರವೇರಿದವು.

ತಿರುಮಲ ತಿರುಪತಿಯಿಂದ ತರಲಾಗಿದ್ದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು. ಟಿಟಿಡಿ ಆಡಳಿತಾಧಿಕಾರಿ ಶೇಷವಸ್ತ್ರವನ್ನು ತಲೆ ಮೇಲೆ ಹೊತ್ತು ಮಠದ ಪ್ರಾಂಗಣದಲ್ಲಿಪ್ರದಕ್ಷಿಣೆ ಹಾಕಿದರು. ನಂತರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅದನ್ನು ತಲೆ ಮೇಲಿಟ್ಟುಕೊಂಡು ರಾಯರ ಸನ್ನಿಧಿಗೆ ತೆಗೆದುಕೊಂಡು ಹೋದರು.

ಮೂಲ ವೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಿ, ಫಲಪುಷ್ಪಗಳಿಂದ ಅಲಂಕಾರ ಮಾಡಲಾಯಿತು.

ADVERTISEMENT

ಭಕ್ತರ ಹರ್ಷೋದ್ಗಾರದ ನಡುವೆ ಸುವರ್ಣ ರಥೋತ್ಸವ ನಡೆಯಿತು. ಚಂಡೆ, ಮದ್ದಳೆ ವಾದ್ಯಗಳ ವೈಭವವು ಮಹೋತ್ಸವದ ಕಳೆಯನ್ನು ಹೆಚ್ಚಿಸಿತು. ನಟರಾದ ಜಗ್ಗೇಶ್‌ ಹಾಗೂ ಕೋಮಲ್‌ ಸಹ ರಾಯರ ದರ್ಶನ ಪಡೆದರು.

ಮಹಾ ರಥೋತ್ಸವ ಇಂದು:ರಾಯರ ಆರಾಧನಾ ಮಹೋತ್ಸವದ ಉತ್ತರಾರಾಧನೆ ದಿನವಾದ ಭಾನುವಾರ ಮಹಾ ರಥೋತ್ಸವ ನಡೆಯುವುದು. ಮಠದಿಂದ ಮುಖ್ಯ ರಸ್ತೆವರೆಗೂ ರಥೋತ್ಸವ ಸಾಗಲಿದೆ.

ಸಂತ್ರಸ್ತರ ರಕ್ಷಣೆಗೆ ಪ್ರಾರ್ಥನೆ:ನಟರಾದ ಜಗ್ಗೇಶ್‌ ಹಾಗೂ ಕೋಮಲ್‌ ಅವರು ರಾಯರ ಮಠಕ್ಕೆ ಶನಿವಾರ ಭೇಟಿ ನೀಡಿ ದರ್ಶನ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಗ್ಗೇಶ್‌, ‘ನೆರೆ ಹಾವಳಿಯಿಂದ ಬಹಳಷ್ಟು ಜನರು ತೊಂದರೆಗೆ ಸಿಲುಕಿದ್ದು, ಸಂತ್ರಸ್ತರನ್ನು ರಕ್ಷಿಸುವಂತೆ ರಾಯರನ್ನು ಪ್ರಾರ್ಥಿಸಿದ್ದೇನೆ’ ಎಂದು ಹೇಳಿದರು.

‘ಕನ್ನಡ ಚಿತ್ರರಂಗದಲ್ಲಿದ್ದವರಿಗೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎನ್ನುವ ಭೇದ ಇರುವುದಿಲ್ಲ.
ಸಂಕಷ್ಟ ಎದುರಾದಾಗ ಎಲ್ಲರಿಗೂ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.