ADVERTISEMENT

ರಾಯಚೂರು: ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಸಕಲ ಸಿದ್ಧತೆ

ಒಂದು ಬ್ಲಾಕ್‌ನಲ್ಲಿ 20 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 15:37 IST
Last Updated 24 ಜೂನ್ 2020, 15:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಯಚೂರು: ಜಿಲ್ಲೆಯಲ್ಲಿ ಜೂನ್‌ 25 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದ್ದು, ಒಟ್ಟು 30,413 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಕೋವಿಡ್ ಸೋಂಕು ಹರಡದಂತೆ ಹೊರ ಜಿಲ್ಲೆಯ 271 ವಿದ್ಯಾರ್ಥಿಗಳು ರಾಯಚೂರಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯ 486 ವಿದ್ಯಾರ್ಥಿಗಳು ಇತರೆ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ಎದುರಿಸಲಿದ್ದಾರೆ. ಜಿಲ್ಲೆಯಲ್ಲಿ 77 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದ್ದು, ಅವುಗಳಲ್ಲಿ ಆರು ಉಪ ಕೇಂದ್ರಗಳಿವೆ. ಒಂದು ಬ್ಲಾಕ್‌ನಲ್ಲಿ 20 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.

ಪರೀಕ್ಷೆಯಲ್ಲಿ ನಕಲು ತಡೆಗಟ್ಟಲು ಜಿಲ್ಲಾ ಜಾಗೃತ ದಳವನ್ನು ರಚಿಸಲಾಗಿದೆ. 16 ಮಂದಿ ಸದಸ್ಯರಿರುವ ಜಿಲ್ಲಾ ಜಾಗೃತ ದಳದಲ್ಲಿ ಪರೀಕ್ಷಾ ರೂಟ್‌ಗಳಿಗೆ ತೆರಳಿ ಮಾರ್ಗದ ಕೇಂದ್ರಗಳನ್ನು ಪರಿಶೀಲಿಸುವರು. ತಾಲ್ಲೂಕು ಹಂತದಲ್ಲಿ ನಾಲ್ಕು ಜನರನ್ನೊಳಗೊಂಡ ಸ್ಕ್ವಾಡ್‌ ತಂಡಗಳನ್ನು ರಚಿಸಲಾಗಿದೆ.

ADVERTISEMENT

ಅಂತರ ಕಾಪಾಡುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರದಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ 200 ವಿದ್ಯಾಥಿಗಳಿಗೆ ಒಂದರಂತೆ ಒಟ್ಟು 229 ಥರ್ಮಲ್ ಸ್ಕ್ಯಾನರ್‌ಗಳನ್ನು ವಿವಿಧ ಇಲಾಖೆಗಳ ಸಹಯೋಗದಲ್ಲಿ ಒದಗಿಸಲಾಗಿದೆ. ಆರೋಗ್ಯ ಇಲಾಖೆಯಿಂದ 75 ಸಾವಿರ, ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ 30 ಸಾವಿರ ಹಾಗೂ ಹಟ್ಟಿ ಚಿನ್ನದ ಗಣಿಯಿಂದ 12 ಸಾವಿರ ಸೇರಿ ಒಟ್ಟು 1.20 ಲಕ್ಷ ಮಾಸ್ಕ್‌ಗಳನ್ನು ಈಗಾಗಲೇ ಶಿಕ್ಷಣ ಇಲಾಖೆಗೆ ನೀಡಲಾಗಿದೆ. ಪ್ರತಿ ವಿದ್ಯಾರ್ಥಿಗೆ ನಾಲ್ಕು ಮಾಸ್ಕ್ ವಿತರಿಸಲಾಗುತ್ತಿದೆ.

ಪ್ರತಿ ಕೇಂದ್ರಕ್ಕೆ 10 ಲೀಟರ್ ಸ್ಯಾನಿಟೈಸರ್ ವಿತರಿಸಲಾಗಿದೆ. ಪರೀಕ್ಷೆ ನಡೆಯುವ ಎಲ್ಲಾ ಕೊಠಡಿಗಳಲ್ಲೂ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಲಾಗಿದೆ. ವಿದ್ಯಾರ್ಥಿಗಳೇ ಕುಡಿಯುವ ನೀರನ್ನು ತರಬೇಕು. ಪರ್ಯಾಯವಾಗಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಕುಡಿಯುವ ನೀರು ಹಾಗೂ ಪೇಪರ್ ಗ್ಲಾಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಕೊಠಡಿ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಹ್ಯಾಂಡ್‌ಗ್ಲೌಸ್‌ಗಳನ್ನು ಧರಿಸಬೇಕಿದ್ದು, ಪರೀಕ್ಷಾ ಕೇಂದ್ರದವರು ಈಗಾಗಲೇ ವಿತರಿಸಿದ್ದಾರೆ.

ಜಿಲ್ಲೆಯಲ್ಲಿ ಹೊರ ರಾಜ್ಯದ ಒಟ್ಟು 6 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ರಾಜಸ್ತಾನದ ಇಬ್ಬರು ವಿದ್ಯಾರ್ಥಿಗಳು ರಾಯಚೂರು ನಗರದ ಪರೀಕ್ಷಾ ಕೇಂದ್ರದಲ್ಲಿ ಹಾಗೂ ಆಂಧ್ರಪ್ರದೇಶದ 4 ವಿದ್ಯಾರ್ಥಿಗಳು ಶಕ್ತಿನಗರದ ಕೇಂದ್ರದಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಈ ಬಾರಿ ಎಲ್ಲಾ ಪರೀಕ್ಷಾ ಕೇಂದ್ರದಲ್ಲಿ ಹೆಚ್ಚುವರಿ ಎರಡು ವಿಶೇಷ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ.

‘ಜ್ವರ, ಕೆಮ್ಮು, ಶೀತ ಇತ್ಯಾದಿ ರೋಗಲಕ್ಷಣಗಳು ಕಂಡುಬಂದರೆ ಅಂತಹ ವಿದ್ಯಾರ್ಥಿಗಳನ್ನು ಈ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಜೂನ್‌ 25 ರಂದು ಪ್ರಥಮ ಭಾಷೆ ಕನ್ನಡ ವಿಷಯದ ಪರೀಕ್ಷೆ ನಡೆಯಲಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎಚ್.ಗೋನಾಳ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.