ADVERTISEMENT

ರಾಯಚೂರು | ಅನಿತಾಗೆ ಕೈತಪ್ಪಿದ ಎಸ್ಸೆಸ್ಸೆಲ್ಸಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 7:49 IST
Last Updated 25 ಜೂನ್ 2020, 7:49 IST
ಪರೀಕ್ಷಾ ಕೇಂದ್ರದಿಂದ ವಾಪಸ್ಸಾದ ವಿದ್ಯಾರ್ಥಿನಿ ಅನಿತಾ
ಪರೀಕ್ಷಾ ಕೇಂದ್ರದಿಂದ ವಾಪಸ್ಸಾದ ವಿದ್ಯಾರ್ಥಿನಿ ಅನಿತಾ    

ರಾಯಚೂರು: ಹಾಲ್‌ ಟಿಕೆಟ್‌ನಲ್ಲಿದ್ದ ಪರೀಕ್ಷಾ ಕೇಂದ್ರದ ವಿಳಾಸ ಗಮನಿಸಿಕೊಳ್ಳದೆ ನೇರವಾಗಿ ಸ್ಥಳೀಯ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದ ವಿದ್ಯಾರ್ಥಿನಿಯೊಬ್ಬರು ಸಂಕಷ್ಟ ಅನುಭವಿಸುವಂತಾಗಿದೆ. ಅಧಿಕಾರಿಗಳ ಗಮನಕ್ಕೆ ಬಂದರೂ ಪರ್ಯಾಯ ವ್ಯವಸ್ಥೆಯಿಲ್ಲದೆ ಪರೀಕ್ಷೆ ಬರೆಯುವುದು ಕೈತಪ್ಪಿದೆ.

ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದ ನಿವಾಸಿ ಅನಿತಾ ಶಂಕರಗೆ ಪರೀಕ್ಷೆ ಬರೆಯುವುದು ತಪ್ಪಿದೆ. ಸ್ಥಳೀಯ ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ಮುಗಿಸಿ ಮರಳಿ ಶಾಲೆಗೆ ಹೋಗಿರಲಿಲ್ಲ. ಎರಡು ವರ್ಷಗಳ ಬಳಿಕ ನೇರವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವುದಕ್ಕೆ ನೋಂದಣಿ ಮಾಡಿಕೊಂಡಿದ್ದರು.

ಜಿಲ್ಲೆಯಲ್ಲಿ ನೇರವಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆಲ್ಲ ಜಿಲ್ಲಾ ಕೇಂದ್ರದಲ್ಲಿ ಪರೀಕ್ಷಾ ಕೇಂದ್ರ ನಿಗದಿ ಮಾಡಲಾಗಿತ್ತು. ಇದರ ಬಗ್ಗೆ ಸಮರ್ಪಕ ಮಾಹಿತಿಯನ್ನು ವಿದ್ಯಾರ್ಥಿನಿ ಪಡೆದಿರಲಿಲ್ಲ.

ADVERTISEMENT

ಹಟ್ಟಿಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಗುರುವಾರ ಬೆಳಿಗ್ಗೆ ಹೋಗಿದ್ದಾಗ, ನೋಂದಣಿ ಸಂಖ್ಯೆ ಇಲ್ಲದಿರುವುದು ಗೊತ್ತಾಗಿದೆ. ಪರೀಕ್ಷಾ ಕೇಂದ್ರದಲ್ಲಿದ್ದ ಅಧಿಕಾರಿಗಳು ಕೂಡಲೇ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ವಿಷಯ ತಿಳಿಸಿದ್ದಾರೆ.

‘ಏನು ವ್ಯವಸ್ಥೆ ಮಾಡುವುದಕ್ಕೆ ಆಗುವುದಿಲ್ಲ. ನೇರ ಪರೀಕ್ಷೆ ಬರೆಯುವವರಿಗೆಲ್ಲ ಒಂದೇ ಕಡೆಯಲ್ಲಿ ವ್ಯವಸ್ಥೆ ಇದೆ. ಜೂನ್‌ 25 ರಂದು ನಡೆದ ಪರೀಕ್ಷಾ ವಿಷಯವೊಂದನ್ನು ಪೂರಕ ಪರೀಕ್ಷೆಯಲ್ಲಿಯೇ ಬರೆಯಬೇಕಾಗುತ್ತದೆ’ ಎಂದು ಡಿಡಿಪಿಐ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಅನಿತಾ ಸಂಬಂಧಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಪರೀಕ್ಷೆ ಕೈತಪ್ಪಿದ್ದರಿಂದ ದುಃಖಿತಳಾದ ವಿದ್ಯಾರ್ಥಿಯು ಮೌನವಾಗಿ ಮನೆಗೆ ವಾಪಸ್ಸಾದರು. ಇನ್ನುಳಿದ ವಿಷಯಗಳ ಪರೀಕ್ಷೆ ಬರೆಯುವುದಕ್ಕೆ ರಾಯಚೂರು ನಗರಕ್ಕೆ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.