ADVERTISEMENT

ಎಸ್ಸೆಸ್ಸೆಲ್ಸಿ: ಬೋಧನೆಗಳ ಪ್ರಸಾರ ಇಂದಿನಿಂದ

ಸಾರ್ವಜನಿಕ ಶಿಕ್ಷಣ ಇಲಾಖೆ, ಅಮೋಘ ಚಾನೆಲ್‌ ಸಹಯೋಗ

​ಪ್ರಜಾವಾಣಿ ವಾರ್ತೆ
Published 17 ಮೇ 2020, 9:44 IST
Last Updated 17 ಮೇ 2020, 9:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಯಚೂರು: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿ ಮಾಡಿಸುವುದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಅಮೋಘ ಚಾನೆಲ್‌ ಸಹಯೋಗದೊಂದಿಗೆ ಪ್ರತಿದಿನ ಟಿವಿ ಪರಧೆಯಲ್ಲಿ ಸರಣಿ ರೂಪದಲ್ಲಿ ಬೋಧನೆಗಳನ್ನು ಪ್ರಸಾರ ಮಾಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಚ್‌. ಗೋನಾಳ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿಗಾಗಿ ವಿದ್ಯಾರ್ಥಿಗಳಿಗೆ ಈಗಾಗಲೇ 12 ಘಟಕಗಳ ಪರೀಕ್ಷೆಗಳನ್ನು ನಡೆಸಲಾಗಿದೆ. ಕೊರೊನಾ ಸೋಂಕು ತಡೆಗಾಗಿ ಲಾಕ್‌ಡೌನ್‌ ಶುರುವಾಗಿದ್ದರಿಂದ ವಾರ್ಷಿಕ ಪರೀಕ್ಷೆಗಳನ್ನು ನಿಗದಿತ ಸಮಯಕ್ಕೆ ನಡೆಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ದೊರತಿರುವ ಹೆಚ್ಚುವರಿ ಸಮಯವನ್ನು ಪರೀಕ್ಷಾ ತಯಾರಿಗಾಗಿ ಮೀಸಲಿರಿಸಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಮೇ 18 ರಿಂದ ಆರೂ ವಿಷಯಗಳ ಬೋಧನೆಯನ್ನು ಘಟಕವಾರು ಸರಣಿ ರೂಪದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಪ್ರತಿದಿನ ಬೆಳಿಗ್ಗೆ 7 ರಿಂದ 9.20ರವರೆಗೂ ಮತ್ತು ಸಂಜೆ 7 ಗಂಟೆಗೆ ಬೋಧನೆಗಳ ಪ್ರಸಾರ ನಡೆಯಲಿದೆ. ಅಲ್ಲದೆ ಈ ಬೋಧನೆಗಳು ಅಮೋಘ ಯೂಟ್ಯೂಬ್ ಚಾನಲ್ ಕೂಡಾ ಲಭ್ಯವಿದೆ. ಎಲ್ಲಾ ವಿದ್ಯಾರ್ಥಿಗಳು ಇವುಗಳನ್ನು ವೀಕ್ಷಿಸುವ ಮೂಲಕ ಪರೀಕ್ಷೆಗೆ ಉತ್ತಮ ತಯಾರಿ ನಡೆಸಬೇಕು ಹಾಗೂ ಪೋಷಕರು ಮಕ್ಕಳಿಗೆ ಇದನ್ನು ವೀಕ್ಷಿಸುವಲ್ಲಿ ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಕೋರಿದ್ದಾರೆ.

ADVERTISEMENT

‘ಈಗಾಗಲೇ ಟಿವಿ ಪಾಠ ನಡೆಸುವ ವಿಶೇಷ ಬೋಧನೆಯ ಕುರಿತು ಎಲ್ಲಾ ಶಾಲಾ ಮುಖ್ಯೋಪಾಧ್ಯಾಯರಿಗೆ ವಿವರಿಸಿ, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ’ ಎಂದು ಬಿ. ಎಚ್. ಗೋನಾಳ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.