ರಾಯಚೂರು: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳೆದ ಭಾರಿಗಿಂತ ಈ ವರ್ಷ ಹೆಚ್ಚಳವಾಗಿದ್ದು, ಮುಂದಿನ ವರ್ಷ 10ನೇ ಸ್ಥಾನದೊಳಗೆ ಜಿಲ್ಲೆಯ ಫಲಿತಾಂಶ ಬರಲು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತರೆಡ್ಡಿ ಜಿ. ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ 2019–20ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಜಿಲ್ಲೆಯ ಟಾಪರ್ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದರು.
ಕಳೆದ ಸಾಲಿನಲ್ಲಿ ರಾಜ್ಯ ಮಟ್ಟದಲ್ಲಿ ಜಿಲ್ಲೆಯು 33ನೇ ಸ್ಥಾನದಲ್ಲಿತ್ತು. ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಶಿಷ್ಠ ಯೋಜನೆ ರೂಪಿಸಿದ್ದರಿಂದ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಯು ಈ ಭಾರಿ 28ನೇ ಸ್ಥಾನಕ್ಕೆ ಬಂದಿದೆ. ಮುಂಬರುವ ದಿನಗಳಲ್ಲಿ ಇನ್ನೂ ಕಠಿಣ ಪರಿಶ್ರಮ ವಹಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ ಫಲಿತಾಂಶವನ್ನು ಅವಲೋಕನ ಮಾಡಿದಾಗ ಖಾಸಗಿ ಶಾಲೆಯ ಮಕ್ಕಳೊಂದಿಗೆ ಸರ್ಕಾರಿ ಶಾಲೆಯ ಮಕ್ಕಳು ಸಹ ಪೈಪೂಟಿ ನಡೆಸಿ ಉತ್ತಮ ಫಲಿತಾಂಶ ಪಡೆದಿರುವುದು ಸಂತೋಷದಾಯಕ ಆಗಿದೆ. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಿ ಮುಂದಿನ ಗುರಿಯನ್ನು ಸಾಧಿಸಬೇಕು ಎಂದು ಸಲಹೆ ನೀಡಿದರು. ಅತಿ ಹೆಚ್ಚು ಅಂಕ ಪಡೆದು ಜಿಲ್ಲೆಗೆ ಕೀರ್ತಿ ತಂದಿರುವ ಎಲ್ಲ ಮಕ್ಕಳಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಅಭಿನಂದನೆಗಳನ್ನು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಚ್.ಗೋನಾಳ ಮಾತನಾಡಿ, ಫಲಿತಾಂಶ ಹೆಚ್ಚಳ ಸತತ ಪ್ರಯತ್ನ ಮಾಡಲಾಗುವುದು. ಮುಂಬರುವ ದಿನಗಳಲ್ಲಿ 10ನೇ ಸ್ಥಾನಕ್ಕೆ ತರಲು ಶ್ರಮಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲೆಯ ಟಾಪರ್‌ಗಳಿಗೆ ಸನ್ಮಾನ: ಮಾನ್ವಿ ತಾಲ್ಲೂಕಿನ ಶ್ರೀವೆಲ್ಲಂಕಿ ರಾಮಕೃಷ್ಣ ವರ್ಮಾ ಪೌಢಶಾಲೆಯ ಕಾಕತಿ ನಗರದ ಸೈಯದ್ ಅಮಾನುಲ್ಲಾ ಹುಸೇನಿ ಮಕವಾಲೆ ಅವರು 620 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ರಿಕಬಚಂದ್ ಸುಖಾಣಿ ಆಂಗ್ಲ ಮಾಧ್ಯಮ ಶಾಲೆಯ ಸಂದೀಪ ಪಾಟೀಲ 619 ಅಂಕ ಪಡೆದು ದ್ವಿತೀಯ ಸ್ಥಾನ, ಮಸ್ಕಿ ತಾಲ್ಲೂಕಿನ ಶ್ರೀ ಜೋಗಿನ್ ರಾಮಣ್ಣ ಮೆಮೋರಿಯಲ್ ಪ್ರೌಢಶಾಲೆಯ ಅಭಿಷೇಕ 618 ಅಂಕ ಪಡೆದು ತೃತೀಯ ಸ್ಥಾನ, ಲಿಂಗಸೂಗೂರು ತಾಲ್ಲೂಕಿನ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಅರುಣ್ ಎಂ.ಮ್ಯಾಗೇರಿ 617 ಅಂಕಗಳೊಂದಿಗೆ ನಾಲ್ಕನೇ ಸ್ಥಾನ, ಸಿಂಧನೂರು ತಾಲ್ಲೂಕಿನ ಮುಕ್ಕುಂದಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಪುಲಕುಂದಾ ಅವರು 616 ಅಂಕಗಳೊಂದಿಗೆ ಐದನೇ ಸ್ಥಾನ ಹಾಗೂ ಲಿಂಗಸೂಗೂರು ಆದರ್ಶ ವಿದ್ಯಾಲಯದ ಪ್ರಶಾಂತ 614 ಅಂಕಗಳನ್ನು ಪಡೆದು ಆರನೇ ಸ್ಥಾನ ಮತ್ತು ಸಿಂಧನೂರು ಪಿಡಬ್ಲ್ಯೂಡಿ ಕ್ಯಾಂಪ್‌ನ ಆದರ್ಶ ವಿದ್ಯಾಲಯದ ವಿಜಯಲಕ್ಷೀ ಅವರು 614 ಅಂಕ ಪಡೆದು ಆರನೇ ಸ್ಥಾನದ ಸಾಧನೆ ಮಾಡಿದ್ದಾರೆ. ಎಲ್ಲ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.