ADVERTISEMENT

ಜಲಜೀವನ್‌ ಮಿಷನ್‌ ಯೋಜನೆಗಳಿಗೆ ಸಂಪುಟ ಒಪ್ಪಿಗೆ

₹1,988 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 27 ಮೇ 2021, 14:22 IST
Last Updated 27 ಮೇ 2021, 14:22 IST
ಶೇಖ್‌ ತನ್ವೀರ್‌ ಆಸೀಫ್‌
ಶೇಖ್‌ ತನ್ವೀರ್‌ ಆಸೀಫ್‌   

ರಾಯಚೂರು: ಜಿಲ್ಲೆಯಲ್ಲಿ 1,988.01 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸಚಿವ ಸಂಪುಟವು ಗುರುವಾರ ಒಪ್ಪಿಗೆ ಸೂಚಿಸಿದೆ.

ನಬಾರ್ಡ್‌ ಜಾರಿಗೆ ತಂದ ಮೂಲ ಸೌಕರ್ಯ ಅಭಿವೃದ್ಧಿ ನೆರವು ಯೋಜನೆಯಡಿಯಲ್ಲಿ ಅನುದಾನ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮಾನ್ವಿ, ಮಸ್ಕಿ, ಕವಿತಾಳ, ತುರುವಿಹಾಳ, ಬಾಳಗಾನೂರು, ಸಿರವಾರ ಹಾಗೂ ಹಟ್ಟಿ ಪಟ್ಟಣಗಳನ್ನೂ ಒಳಗೊಂಡಂತೆ ಪ್ರತಿ ಗ್ರಾಮದ ಜನವಸತಿಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗುತ್ತದೆ.

ಜಿಲ್ಲೆಯಲ್ಲಿ 15.83 ಲಕ್ಷ ಗ್ರಾಮೀಣ ಜನಸಂಖ್ಯೆ ಇದ್ದು, 1,406 ಜನವಸತಿಗಳಿವೆ. 3.42 ಲಕ್ಷ ಮನೆಗಳಿಗೆ ಪೈಪ್‌ಲೈನ್‌ ಸಂಪರ್ಕ ಕಲ್ಪಿಸಬೇಕಾಗುತ್ತದೆ. ಏಳು ನಗರ ಪ್ರದೇಶಗಳಿದ್ದು, 17.70 ಲಕ್ಷ ಜನಸಂಖ್ಯೆ ಇದೆ. ಯೋಜನೆ ಅನುಷ್ಠಾನಕ್ಕೆ ಒಟ್ಟು ₹1,725.38 ಕೋಟಿ ಬಂಡವಾಳ ವೆಚ್ಚವಾಗಲಿದ್ದು, ₹262.63 ಕೋಟಿ ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚ ಆಗಲಿದೆ. ಒಟ್ಟು 1,988.01 ಕೋಟಿ ವೆಚ್ಚದಲ್ಲಿ ಕೇಂದ್ರ ಸರ್ಕಾರವು ₹772.62 ಕೋಟಿ ಅನುದಾನ ಒದಗಿಸಲಿದೆ. ನಬಾರ್ಡ್‌ 857.16 ಕೋಟಿ ಸಹಾಯಧನ ನೀಡಲಿದೆ. ರಾಜ್ಯ ಸರ್ಕಾರವು ₹358.23 ಕೋಟಿ ಭರಿಸಲಿದ್ದು, ಮುಂದಿನ 30 ತಿಂಗಳುಗಳಲ್ಲಿ ಯೋಜನೆ ಜಾರಿಗೆ ಬರಬೇಕಿದೆ.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್‌ ತನ್ವೀರ್‌ ಆಸೀಫ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಜಿಲ್ಲೆಯಲ್ಲಿ ಸ್ಟುಪ್‌ ಸಂಸ್ಥೆಯು ಈಗಾಗಲೇ ಡಿಪಿಆರ್‌ ಮುಗಿಸಿದೆ. ಇನ್ನು ಮುಂದೆ ಹಂತಹಂತವಾಗಿ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ದೊರೆಯಲಿದೆ’ ಎಂದರು.

ಪ್ರಗತಿ ಪರಿಶೀಲನೆ: ಜಲಜೀವನ್‌ ಮಿಷನ್‌ ಜಾರಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕೆಲಸ ಆರಂಭಿಸಿದ್ದಾರೆ. ಕಳೆದ ಫೆಬ್ರುವರಿ 19 ರಂದು ಜಿಲ್ಲೆಗೆ ಬಂದಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಈ ಬಗ್ಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದರು. ಮಾರ್ಚ್‌ ಅಂತ್ಯದೊಳಗೆ ಎಲ್ಲಾ ಗ್ರಾಮ ಪಂಚಾಯಿತಿಗಳಿಂದ ಡಿಪಿಆರ್‌ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸುವಂತೆ ಸೂಚಿಸಿದ್ದರು.

‘ಜಿಲ್ಲೆಯ ಪ್ರತಿ ಮನೆಗೂ ನಲ್ಲಿ ಸಂಪರ್ಕ ಕಲ್ಪಿಸಿ ನೀರು ಪೂರೈಸುವುದಕ್ಕೆ ‘ಜಲಧಾರೆ’ ಯೋಜನೆ ಅನುಷ್ಠಾನಕ್ಕೆ ನಬಾರ್ಡ್‌ ಈಗಾಗಲೇ ಅರ್ಧದಷ್ಟು ಸಾಲ ನೀಡಲು ತಾತ್ವಿಕ ಒಪ್ಪಿಗೆ ನೀಡಿದೆ. ಇನ್ನುಳಿದ ಅರ್ಧ ಪಾಲನ್ನು ಕೇಂದ್ರದ ‘ಜಲಜೀವನ್‌ ಯೋಜನೆ’ಯಡಿ ಅನುದಾನ ಪಡೆದು, ಇನ್ನುಳಿದ ಮೊತ್ತವನ್ನು ರಾಜ್ಯ ಸರ್ಕಾರದಿಂದ ಪಡೆಯಲು ಯೋಜಿಸಲಾಗಿದೆ’ ಎಂದು ಈಶ್ವರಪ್ಪ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.