
ಜಾಲಹಳ್ಳಿ: ಗಲಗ ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಥಳಿಸಿದ ಆರೋಪದ ಮೇಲೆ ಅತಿಥಿ ಶಿಕ್ಷಕಿ ಹರ್ಷಿಯಾ ತಸ್ಕಿನ್ ಎಂಬುವವರನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿದೆ.
ವಿದ್ಯಾರ್ಥಿಯ ಪಾಲಕರು ಶಾಲೆಗೆ ಭೇಟಿ ನೀಡಿ ಹಲ್ಲೆ ನಡೆಸಿದ ಕುರಿತು ವಿಚಾರಿಸಿದಾಗ,‘ವಿದ್ಯಾರ್ಥಿಗೆ ಓದು–ಬರಹ ಬರುವುದಿಲ್ಲ’ ಎಂದು ಶಿಕ್ಷಕರು ಉತ್ತರಿಸಿದ್ದಾರೆ. ಆಗ ‘ಮಗನ ವರ್ಗಾವಣೆ ಪ್ರಮಾಣ ಪತ್ರ ನೀಡಿ, ನಾವು ಬೇರೆ ಶಾಲೆಗೆ ಸೇರಿಸುತ್ತೇವೆ’ ಎಂದು ಮುಖ್ಯಶಿಕ್ಷಕರಿಗೆ ಪಾಲಕರು ತಿಳಿಸಿದ್ದಾರೆ.
‘ಮೂರನೇ ತರಗತಿಯ ಬಾಲಕನಿಗೆ ಓದಲು ಬರುವುದಿಲ್ಲ ಎಂದು ಹೇಳಿ ಈ ರೀತಿ ಥಳಿಸುವುದು ಎಷ್ಟು ಸರಿ’ ಎಂದು ಪಾಲಕರು ಪ್ರಶ್ನಿಸಿದ್ದಾರೆ. ಘಟನೆಯ ಕುರಿತು ಶಾಲೆಯ ಮುಖ್ಯಶಿಕ್ಷಕರು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಮಲ್ಲಿಕಾರ್ಜುನ, ಬಿಆರ್‌ಪಿ ಶಿವರಾಜ ನಾಯಕ ಪೂಜಾರಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಅತಿಥಿ ಶಿಕ್ಷಕಿಯನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದಾರೆ. ವಿಷಯ ತಿಳಿದು ಜಾಲಹಳ್ಳಿ ಪಿಎಸ್ಐ ವೈಶಾಲಿ ಝಳಕಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.