ರಾಯಚೂರು: ಮಹಾನಗರಪಾಲಿಕೆ, ಉಪ ವಿಜ್ಞಾನ ಕೇಂದ್ರ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಉಪ ವಿಜ್ಞಾನ ಕೇಂದ್ರದಲ್ಲಿ ವಿದ್ಯಾರ್ಥಿಗಳು ಖಗ್ರಾಸ್ ಚಂದ್ರ ಗ್ರಹಣವನ್ನು ಟೆಲಿಸ್ಕೋಪ್ ಮೂಲಕ ವೀಕ್ಷಿಸಿದರು.
ವಿದ್ಯಾರ್ಥಿಗಳು ಚಂದ್ರಗ್ರಹಣ ವೀಕ್ಷಿಸಿ ಖಗೋಲದಲ್ಲಿ ನಡೆಯುವ ಪ್ರಕ್ರಿಯೆಯ ಬಗ್ಗೆ ವಿಜ್ಞಾನ ಶಿಕ್ಷಕರನ್ನು ಕುತೂಲಹದಿಂದ ಪ್ರಶ್ನೆಗಳನ್ನು ಕೇಳಿದರು. ಶಿಕ್ಷಕರು ಮಕ್ಕಳ ಪ್ರಶ್ನೆಗಳನ್ನು ಸಂಯಮದಿಂದ ಆಲಿಸಿ ಸಮಾಧಾನದಿಂದ ಉತ್ತರಿಸಿದರು.
ಗ್ರಹಣದ ಸಮಯದಲ್ಲಿ ಚಂದ್ರನು ತಾಮ್ರ-ಕೆಂಪು ಬಣ್ಣದಲ್ಲಿ ಕಂಡನು. ಭೂಮಿಯ ವಾತಾವರಣದ ಮೂಲಕ ಹಾದುಹೋಗುವ ಸೂರ್ಯನ ಬೆಳಕಿನ ನೀಲಿ ಬಣ್ಣವು ಹರಡುತ್ತದೆ ಮತ್ತು ಕೆಂಪು ಬಣ್ಣವು ಚಂದ್ರನ ಮೇಲೆ ಬೀಳುತ್ತದೆ. ಹೀಗಾಗಿ ಬಣ್ಣದಲ್ಲಿ ಬದಲಾವಣೆ ಕಂಡು ಬಂದಿದೆ ಎಂದು ಶಿಕ್ಷಕರು ವಿವರಿಸಿದರು.
ಸೂರ್ಯನ ಬೆಳಕು ಭೂಮಿಯ ನೆರಳಿನಿಂದ ಭಾಗಶಃ ಅಥವಾ ಸಂಪೂರ್ಣವಾಗಿ ತಡೆಯಲ್ಪಟ್ಟಾಗ ಚಂದ್ರಗ್ರಹಣವು ಸಂಭವಿಸುತ್ತದೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ. ಭೂಮಿಯ ಒಳ ನೆರಳು ಚಂದ್ರನನ್ನು ಸಂಪೂರ್ಣವಾಗಿ ಆವರಿಸಿದಾಗ ಖಗ್ರಾಸ ಚಂದ್ರಗ್ರಹಣ ಉಂಟಾಗುತ್ತದೆ ಎಂದು ಪ್ರಾತ್ಯಕ್ಷಿಯೆ ಮೂಲಕ ವಿವರಿಸಿದರು.
ಹುಣ್ಣಿಮೆ ರಾತ್ರಿಯಲ್ಲಿ ಕಂಗೊಳಿಸಬೇಕಿದ್ದ ಚಂದ್ರ ಇಂದು ಭೂಮಿಯ ಮರೆಯಲ್ಲಿ ಕೆಲಹೊತ್ತು ಮರೆಯಾಗಿ ಹೋದ ಕೌತುಕವನ್ನು ಮಕ್ಕಳು ವೀಕ್ಷಿಸಿ ಆನಂದಿಸಿದರು.
ಜಿಲ್ಲಾಡಳಿತದಿಂದ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಿಂದ ನವೋದಯ ಆಸ್ಪತ್ರೆ ಸಮೀಪವಿರುವ ಉಪ ವಿಜ್ಞಾನ ಕೇಂದ್ರದ ವರೆಗೆ ಉಚಿತ ಬಸ್ಸಿನ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.
ದರ್ಬೆ ಬಂಧನ:
ಭಾನುವಾರ ಮಧ್ಯಾಹ್ನ ದೇವರಿಗೆ ದರ್ಬೆ ಬಂಧನ ಮಾಡಲಾಯಿತು. ಪೂಜೆ ಪುನಸ್ಕಾರಗಳು ನಡೆಯಲಿಲ್ಲ. ನಗರದಲ್ಲಿನ ಬಹುತೇಕ ದೇವಾಲಯಗಳು ಮುಚ್ಚಿದ್ದವು. ಗ್ರಹಣ ವೇಳೆ ಅನೇಕ ಜನ ಮನೆಯಲ್ಲಿ ಪೂಜೆ ಮೂಲಕ ದೇವರ ಜಪ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.