
ಮಸ್ಕಿ: ಹಿಂದೂ–ಮುಸ್ಲಿಂ ಭಾವೈಕ್ಯದ ಸಂಗಮ ಎಂದೇ ಪ್ರಖ್ಯಾತಿ ಪಡೆದಿರುವ ತಾಲ್ಲೂಕಿನ ಹಸಮಕಲ್ ಗ್ರಾಮದಲ್ಲಿ ಗುರುವಾರ ಹಜರತ್ ಮಹ್ಮದ್ ಷರೀಫ್ ಖಾನ್ ಸಾಹೇಬ್ ದರ್ಗಾದ ಉರುಸ್ ಅದ್ದೂರಿಯಾಗಿ ಜರುಗಿತು.
ಉರುಸ್‌ನ ನಿಮಿತ್ತ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಂತೆಕೆಲ್ಲೂರಿನ ಘನಮಠದಿಂದ ಆಗಮಿಸಿದ ಗಂಧವನ್ನು ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಭಕ್ತಾದಿಗಳು ಮೆರವಣಿಗೆ ಮೂಲಕ ಖಾನ್ ಸಾಹೇಬರ ಕರ್ತೃ ಗದ್ದುಗೆಗೆ ತಂದರು.
ಸಂತೆಕೆಲ್ಲೂರಿನ ಮಹಾಂತ ಶಿವಾಚಾರ್ಯರು, ಮಸ್ಕಿಯ ಶೇಖ್ ಖಾಜಾ ಮೊಹಿನುದ್ದೀನ್ ಖಾಜಿ ಸಮ್ಮುಖದಲ್ಲಿ ಗಲೀಫ್, ಗಂಧ, ಹೂ ಸಮರ್ಪಿಸಿ ಧ್ವಜಾರೋಹಣ ನೆರವೇರಿಸಲಾಯಿತು.
ಮಹಾಂತ ಶಿವಾಚಾರ್ಯರು ಮಾತನಾಡಿ,‘ಮನುಷ್ಯರೆಲ್ಲರೂ ಒಂದೇ ಎಂದು ಶರಣರು, ಸೂಫಿಗಳು ಸಾರುತ್ತ ಬಂದಿದ್ದಾರೆ. ಅದರಂತೆ ಗಂಧ, ಉರುಸ್ ಎನ್ನುವುದು ವಿಶೇಷವಾದ ಜಾತ್ರೆಯಾಗಿದೆ’ ಎಂದರು.
ಶೇಖ್ ಖಾಜಾ ಮೊಹಿನುದ್ದೀನ್ ಖಾಜಿ ಮಾತನಾಡಿ,‘ಹಿಂದೂ–ಮುಸ್ಲಿಂ ನೆಪದಲ್ಲಿ ಅನೇಕರು ಧರ್ಮದ ವಿಷಬೀಜ ಬಿತ್ತಿ, ಜನರ ಮಧ್ಯೆ ಜಗಳ ತಂದಿಟ್ಟು ತಮಾಷೆ ನೋಡುತ್ತಾರೆ. ಇಂಥ ಸಂದರ್ಭದಲ್ಲಿ ನಮ್ಮ ತಾಲ್ಲೂಕಿನ ಹಸಮಕಲ್ ಗ್ರಾಮದ ಉರುಸ್ ಹಿಂದೂ–ಮುಸ್ಲಿಂ ಭಾವೈಕ್ಯದ ಸಂಗಮವೆಂದೇ ಪ್ರಖ್ಯಾತಿ ಪಡೆದಿದೆ’ ಎಂದರು.
ಉರುಸ್ ಅಂಗವಾಗಿ ದುರ್ಗಾದೇವಿ ಭಜನಾ ಮಂಡಳಿ ಸೇರಿದಂತೆ ಇತರ ಭಜನಾ ಮಂಡಳಿಗಳಿಂದ ಬುಧವಾರ ಅಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.