ADVERTISEMENT

ಸಮಾನತೆ ಬದುಕು ರೂಪಿಸಿಕೊಳ್ಳಲು ಬಿ.ಮಾಳಮ್ಮ ಸಲಹೆ

ದೇವದಾಸಿ ಮಹಿಳಾ ವಿಮೋಚನಾ ಸಂಘದ ಸಾಧನಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 6 ಮೇ 2019, 13:19 IST
Last Updated 6 ಮೇ 2019, 13:19 IST
ರಾಯಚೂರಿನಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘಟನೆ ಜಿಲ್ಲಾ ಸಮಿತಿಯ ಸಾಧನಾ ಸಮಾವೇಶದಲ್ಲಿ ಜಿಲ್ಲಾಧ್ಯಕ್ಷೆ ಎಚ್.ಪದ್ಮಾ ಮಾತನಾಡಿದರು
ರಾಯಚೂರಿನಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘಟನೆ ಜಿಲ್ಲಾ ಸಮಿತಿಯ ಸಾಧನಾ ಸಮಾವೇಶದಲ್ಲಿ ಜಿಲ್ಲಾಧ್ಯಕ್ಷೆ ಎಚ್.ಪದ್ಮಾ ಮಾತನಾಡಿದರು   

ರಾಯಚೂರು: ದೇವದಾಸಿ ಪದ್ಧತಿಯಿಂದ ವಿಮೋಚನೆಗೊಂಡ ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಸಮಾನತೆ ಬದುಕು ರೂಪಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಸಲಹೆ ನೀಡಿದರು.

ನಗರದ ಜೆಸಿ ಭವನದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘಟನೆ ಜಿಲ್ಲಾ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ಸಾಧನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ದೇವದಾಸಿ ಪದ್ಧತಿಗೆ ದಲಿತ ಮಹಿಳೆಯರು ಹಾಗೂ ಬಾಲಕಿಯರು ಬಲಿಯಾಗದಂಡೆ ತಡೆಯುವ ಉದ್ದೇಶದಿಂದ ಸಂಘ ಕೆಲಸ ಮಾಡುತ್ತಿದೆ. ಈ ಅನಿಷ್ಠ ಪದ್ಧತಿ ನಿರ್ಮೂಲನೆಗಾಗಿ ಹಾಗೂ ದೌರ್ಜನ್ಯಕ್ಕೆ ಬಲಿಯಾದವರ ಸ್ವಾವಲಂಬಿ ಬದುಕಿಗಾಗಿ ಯೋಜನೆ ರೂಪಿಸಲು ಸರ್ಕಾರದ ವಿರುದ್ಧ ಹೋರಾಟ ಮಾಡಲಾಗಿದೆ ಎಂದರು.

ADVERTISEMENT

ಹಲವು ಬಾರಿ ಹೋರಾಟ ಮಾಡಿರುವುದರಿಂದ ಸಂಘಟನೆಯ ಬೇಡಿಕೆಯಂತೆ ಈ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಯೋಜನೆ ಜಾರಿಗೊಳಿಸಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷೆ ಎಚ್.ಪದ್ಮಾ ಮಾತನಾಡಿ, 1984 ಮತ್ತು 90ರಲ್ಲಿ ದೇವದಾಸಿ ಕಾಯ್ದೆ ಜಾರಿಗೊಳಿಸಿ ದೇವದಾಸಿಯನ್ನು ಸರ್ವೆ ಮಾಡಲಾಯಿತು. 2006 ರಲ್ಲಿ ಸಂಘಟನೆ ರಚನೆಯಾದ ನಂತರ ದೇವದಾಸ ಪದ್ಧತಿ ತೊಲಗಿಸುವ ನಿಟ್ಟಿನಲ್ಲಿ ಹಾಗೂ ಆರ್ಥಿಕ ಸುಧಾರಣೆಗೆ ಸೌಲಭ್ಯ ಒದಗಿಸಲು ಹೋರಾಟ ಆರಂಭಿಸಲಾಯಿತು ಎಂದು ಹೇಳಿದರು.

ಹಲವು ಬೇಡಿಕೆಗಳನ್ನಿಟ್ಟುಕೊಂಡು ಮಾಡಿದ ಹೋರಾಟದ ಫಲವಾಗಿ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ದೇವದಾಸಿಯರ ಮಕ್ಕಳನ್ನು ಮದುವೆ ಮಾಡಿಕೊಂಡರೆ ಗೌರವಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಮದುವೆ ಮಾಡಿಕೊಳ್ಳಲು ಮುಂದಾಗುತ್ತಿಲ್ಲ ಎಂದರು.

ಮದುವೆ ಮಾಡಿಕೊಳ್ಳುವ ಮಹಿಳೆಯರಿಗೆ ₹ 5 ಲಕ್ಷ, ಪುರುಷರಿಗೆ ₹ 3 ಲಕ್ಷ ಪ್ರೋತ್ಸಾಹಧನ ನೀಡಲು ಸರ್ಕಾರ ಆದೇಶಿಸಿದೆ. ತಾಲ್ಲೂಕಿನಲ್ಲಿ 200 ದೇವದಾಸಿಯರಿಗೆ ಹಕ್ಕುಪತ್ರ ನೀಡಲಾಗಿದೆ. ಮನೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಸೌಲಭ್ಯ ಕೊಡಿಸಲು ಹಣ ಕೇಳುವ ಸಾಧ್ಯತೆಗಳಿದ್ದು, ಇಂತಹವುಗಳಿಗೆ ಕಿವಿಗೊಡದೆ ಸಂಘಟನೆ ಸಹಕಾರ ಪಡೆದು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಶರಣಬಸವ, ಜನವಾದಿ ಮಹಿಳಾ ಸಂಘಟನೆಯ ಸುಲೋಚನಾ, ಅಂಗನವಾಡಿ ನೌಕರರ ಸಂಘದ ವರಲಕ್ಷ್ಮೀ ಮಾತನಾಡಿದರು. ಕೆ.ಜಿ.ವೀರೇಶ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.