ಪ್ರಾತಿನಿಧಿಕ ಚಿತ್ರ
ರಾಯಚೂರು: ಸರ್ಕಾರದಿಂದ ವಿತರಿಸುವ ನಾಲ್ಕು ಚಕ್ರದ ಸ್ಕೂಟಿ ನೀಡದ ಕಾರಣಕ್ಕೆ ಮನನೊಂದ ಅಂಗವಿಕಲ ವ್ಯಕ್ತಿಯೊಬ್ಬರು ಓವರ್ ಹೆಡ್ ಟ್ಯಾಂಕ್ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲ್ಲೂಕಿನ ದೇವಸುಗೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ಲೇಬರ್ ಕಾಲೊನಿ ನಿವಾಸಿ ಶಫಿ (ಮುನ್ನಾ) ಆತ್ಮಹತ್ಯೆಗೆ ಯತ್ನಿಸಿದವರು. ಸಮೀಪದ ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್‌ಟಿಪಿಎಸ್)ದ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ಶಫಿ ಅಂಗವಿಕಲರಿಗೆ ಕೊಡುವ ನಾಲ್ಕು ಚಕ್ರದ ಸ್ಕೂಟಿ ಮಂಜೂರು ಮಾಡಿಸಿಕೊಳ್ಳಲು ನಾಲ್ಕೈದು ವರ್ಷಗಳಿಂದ ಸತತ ಪ್ರಯತ್ನ ನಡೆಸಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಯಾವುದೇ ರೀತಿಯ ಸ್ಪಂದನೆ ನೀಡದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.
ಮಾಹಿತಿ ಪಡೆದ ಶಕ್ತಿನಗರ ಠಾಣೆ ಪೊಲೀಸರು ಹಾಗೂ ಸ್ಥಳೀಯ ಅಧಿಕಾರಿಗಳು ಶಫಿಯ ಮನವೊಲಿಸಿದ್ದಾರೆ. ನಾಲ್ಕು ಚಕ್ರದ ವಾಹನ ಕೊಡಿಸುವುದಾಗಿ ಭರವಸೆ ಕೊಟ್ಟ ಬಳಿಕ ಕೆಳಗಿಳಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಕ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.