ADVERTISEMENT

‘13 ಬೆಳೆಗಳಿಗೆ ಬೆಂಬಲ ಬೆಲೆಗೆ ಶಿಫಾರಸು’

ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಘಟಕಗಳ ರಾಜ್ಯಮಟ್ಟದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 13:04 IST
Last Updated 23 ಫೆಬ್ರುವರಿ 2019, 13:04 IST
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಘಟಕಗಳ ರಾಜ್ಯಮಟ್ಟದ ಕಾರ್ಯಾಗಾರವನ್ನು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್ ಪ್ರಕಾಶ ಕಮ್ಮರಡಿ ಉದ್ಘಾಟಿಸಿ ಮಾತನಾಡಿದರು 
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಘಟಕಗಳ ರಾಜ್ಯಮಟ್ಟದ ಕಾರ್ಯಾಗಾರವನ್ನು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್ ಪ್ರಕಾಶ ಕಮ್ಮರಡಿ ಉದ್ಘಾಟಿಸಿ ಮಾತನಾಡಿದರು    

ರಾಯಚೂರು: ರೈತರ ಬೆಳೆಯುವ ಪ್ರಮುಖವಾದ 13 ಬೆಳೆಗಳಿಗೆ ಬೆಂಬಲ ಬೆಲೆಯನ್ನು ನೀಡಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್ ಪ್ರಕಾಶ ಕಮ್ಮರಡಿ ಹೇಳಿದರು.

ನಗರದ ಕೃಷಿ ವಿಶ್ವವಿದ್ಯಾಲಯದ ವಿಚಾರ ಸಂಕೀರ್ಣ ಕೊಠಡಿಯಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಕೃಷಿ ಬೆಲೆ ಆಯೋಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಘಟಕಗಳ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕೃಷಿ ಬೆಲೆ ಸಂಬಂಧಿಸಿದಂತೆ ಆಯೋಗದಿಂದ ಸರ್ಕಾರಕ್ಕೆ ಬೃಹತ್ ವರದಿಯನ್ನು ನೀಡಲಾಗಿತ್ತು. ಅದರಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರವು ಐದು ಪ್ರಮುಖ ಅಂಶಗಳನ್ನು ಅನುಷ್ಠಾನಕ್ಕೆ ಕ್ರಮಕೈಗೊಂಡಿದೆ. ಸಮ್ಮಿಶ್ರ ಸರ್ಕಾರವು ರೈತರ ಪರವಾಗಿದೆ. ರಾಜ್ಯದಲ್ಲಿ ಭತ್ತ ಬೇಸಾಯಗಾರರು ಮಳೆ ಕೊರತೆಯಿಂದ ಕೈಕಟ್ಟಿ ಕುಳಿತಿದ್ದಾರೆ. ಇವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದರು.

ADVERTISEMENT

ರೈತರ ಹಿತ ಕಾಪಾಡುವುದೇ ಕೃಷಿ ಬೆಲೆ ಆಯೋಗದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್ ಕಟ್ಟಿಮನಿ ಮಾತನಾಡಿ, ರೈತರು ದೇಶದ ಬೆನ್ನೆಲುಬಾಗಿದ್ದಾರೆ. ರೈತರು ಜಾಣರಾಗಿ ಒಂದೇ ಬೆಳೆಯನ್ನು ಬೆಳೆಯದೇ ವಿವಿಧ ರೀತಿಯ ಬೆಳೆಗಳನ್ನು ಬೆಳೆಯಬೇಕು. ರೈತರು ಜಾಣರಾದರೇ ಇಡೀ ದೇಶವನ್ನೇ ಆಳುತ್ತಾರೆ. ಕೃಷಿ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿದರೆ ರೈತ ಉದ್ಧಾರವಾಗುತ್ತಾನೆ ಎಂದು ಹೇಳಿದರು.

ಮುಖ್ಯ ಬೆಳಗಳ ವಸ್ತುಸ್ಥಿತಿ ವಿಶ್ಲೇಷಣೆಯ ಕರಪತ್ರಗಳನ್ನು ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಕೆ.ಎನ್‌ಕಟ್ಟಿಮನಿ ಇವರು ಬಿಡುಗಡೆಗೊಳಿಸಿದರು. ಜಂಟಿ ಕೃಷಿ ಇಲಾಖೆ ನಿರ್ದೇಶಕಿ ಡಾ.ಚೇತನ ಪಾಟೀಲ್, ಕೃಷಿ ಅಧಿಕಾರಿಗಳಾದ ಡಾ.ಡಿ.ಎಮ್.ಚಂದರಂಗಿ, ಡಾ.ಬಿ.ಕೆ ದೇಸಾಯಿ, ಡಾ. ಬಿ.ಎಂ ಚಿತ್ತಾಪೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.