ADVERTISEMENT

ಕಚೇರಿ ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಕಂಡರೆ ಅಮಾನತು: ಶರಣಪ್ರಕಾಶ ಎಚ್ಚರಿಕೆ

ಸಭೆಯಲ್ಲಿ ಆರೋಗ್ಯ ಸಚಿವರಿಂದ ವೈದ್ಯರಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 13:49 IST
Last Updated 24 ಜನವರಿ 2025, 13:49 IST
ರಾಯಚೂರಿನ ಒಪೆಕ್ ಆಸ್ಪತ್ರೆಯಲ್ಲಿ ನಡೆದ ಒಪೆಕ್‌ ಹಾಗೂ ರಿಮ್ಸ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿದರು
ರಾಯಚೂರಿನ ಒಪೆಕ್ ಆಸ್ಪತ್ರೆಯಲ್ಲಿ ನಡೆದ ಒಪೆಕ್‌ ಹಾಗೂ ರಿಮ್ಸ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿದರು   

ರಾಯಚೂರು: ‘ವೈದ್ಯರು ಹಾಗೂ ತಜ್ಞ ವೈದ್ಯರು ಸಂಜೆ 4 ಗಂಟೆ ವರೆಗೂ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಬೇಕು. ಕಚೇರಿ ವೇಳೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕಂಡು ಬಂದರೆ ಯಾವುದೇ ಮುಲಾಜಿಲ್ಲದೇ ನೇರವಾಗಿ ಅಮನಾತು ಮಾಡಲಾಗುವುದು‘ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಎಚ್ಚರಿಕೆ ನೀಡಿದರು.

ನಗರದ ಒಪೆಕ್ ಆಸ್ಪತ್ರೆಯಲ್ಲಿ ಒಪೆಕ್‌ ಹಾಗೂ ರಿಮ್ಸ್‌ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ‘ಸಂಜೆ 4.30 ಒಳಗೆ ಖಾಸಗಿ ಆಸ್ಪತ್ರೆಯಲ್ಲಿ ಕಂಡರೆ ಮನೆಗೆ ಕಳಿಸಲಾಗುವುದು. ಪೂರ್ಣ ಸಮಯ ಆಸ್ಪತ್ರೆಯಲ್ಲಿ ಕಳೆಯಲಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು‘ ಎಂದು ತಾಕೀತು ಮಾಡಿದರು.

‘ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗಬೇಕು. ವೈದ್ಯರು ಮತ್ತು ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಅತ್ಯಾಧುನಿಕ ಸೇವೆಗಳನ್ನು ಒದಗಿಸಲು ಅಗತ್ಯವಿರುವ ಹೆಚ್ಚುವರಿ ತುರ್ತು ನಿಗಾ ಘಟಕಗಳನ್ನು ಸ್ಥಾಪಿಸುವ ಮೂಲಕ ಜನರಿಗೆ ಗುಣಮಟ್ಟ ಸೇವೆ ಒದಗಿಸಲು ಮತ್ತಷ್ಟು ಪ್ರಯತ್ನಗಳು ನಡೆಯಬೇಕು’ ಎಂದು ತಿಳಿಸಿದರು.

ADVERTISEMENT

‘ಕಾರ್ಡಿಯೋಲಾಜಿ ಮತ್ತೆ ನೆಪ್ರೋಲಾಜಿ ಸೇರಿದಂತೆ ಕಾರ್ಯನಿರ್ವಹಿಸುತ್ತಿರುವ ತುರ್ತು ಚಿಕಿತ್ಸಾ ನಿಗಾ ಘಟಕಗಳನ್ನು ಐದಕ್ಕೆ ಹೆಚ್ಚಿಸಿ ಡಯಾಲಿಸಿಸ್, ಮಕ್ಕಳ ಶಸ್ತ್ರ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಬೇಕು‘ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಕ್ಯಾಥ್‌ಲ್ಯಾಬ್‌ ಸೇರಿ ಹೆಚ್ಚುವರಿ ತುರ್ತು ನಿಗಾ ಘಟಕ ಪ್ರಾರಂಭಿಸಲು ಅಂದಾಜು ಪಟ್ಟಿ ಸಲ್ಲಿಸಬೇಕು. ಹೃದಯ ಸಂಬಂಧಿ ರೋಗಿಗಳು ಸೇರಿದಂತೆ ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್, ಬೆಂಗಳೂರಿಗೆ ರೋಗಿಗಳನ್ನು ಕಳುಹಿಸುವಂತಾಗಬಾರದು. ಓಪೆಕ್ ಆಸ್ಪತ್ರೆಯಲ್ಲಿಯೇ ಲಭ್ಯವಿರುವ ಸೌಲಭ್ಯಗಳ ಮೂಲಕ ಜನರಿಗೆ ಗುಣಮಟ್ಟದ ಸೇವೆ ಒದಗಿಸಬೇಕು. ಅಗತ್ಯಬಿದ್ದರೆ ಕಲ್ಬುರ್ಗಿಯ ಜಯದೇವ ಆಸ್ಪತ್ರೆಗೆ ರವಾನಿಸಬೇಕು‘ ಎಂದು ಹೇಳಿದರು.

‘ಒಪೆಕ್‌ ಆಸ್ಪತ್ರೆಯಲ್ಲಿಯೇ ಮೂತ್ರಕೋಶ ಅಳವಡಿಕೆ ವ್ಯವಸ್ಥೆ ಆರಂಭಿಸಿ ಸೌಲಭ್ಯಗಳ ಕುರಿತು ಪ್ರಸ್ತಾವನೆ ಸಲ್ಲಿಸಬೇಕು. ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಗೆ ಬೇಕಾದ ಯಂತ್ರೋಪಕರಣ ಹಾಗೂ ಸಿಬ್ಬಂದಿ ಒದಗಿಸಬೇಕು. ತಜ್ಞ ವೈದ್ಯರು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಬೇಕು. ದಂತ ಚಿಕಿತ್ಸೆಗೆ ಒಪೆಕ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಿದೆ. ಆದ್ದರಿಂದ ಇಲ್ಲಿನ ವೈದ್ಯರ ಸೇವೆಯನ್ನು ರಿಮ್ಸನಲ್ಲಿ ಪಡೆದುಕೊಳ್ಳಲು ಯೋಜಿಸಬೇಕು’ ಎಂದು ಸೂಚನೆ ನೀಡಿದರು.

‘ಒಪೆಕ್ ಮತ್ತು ರಿಮ್ಸ್ ಕ್ಯಾಂಪಸ್ ಅಭಿವೃದ್ಧಿಗೆ ನೀಲನಕ್ಷೆ ಸಿದ್ದಪಡಿಸಿ ಪ್ರಸ್ತಾವ ಸಲ್ಲಿಸಿ ಮಾಸ್ಟರ್ ಪ್ಲಾನ್ ಒಳಗೊಂಡಿರುವ ಆಕರ್ಷಣೀಯ ಸೌಲಭ್ಯ ಒದಗಿಸಲು ಸಿದ್ಧತೆ ಮಾಡಿಕೊಳ್ಳಬೇಕು‘ ಎಂದರು.

‘ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಸಿಎಸ್‌ಆರ್ ಅನುದಾನದಲ್ಲಿ ಡಯಾಲಿಸಿಸ್ ಯಂತ್ರಗಳನ್ನು ನೀಡಲು ಮುಂದೆ ಬಂದಿದ್ದು, ಕೂಡಲೇ ಪ್ರಕ್ರಿಯೆ ಪೂರ್ಣಗೊಳಿಸಿ ಸೇವೆ ಪ್ರಾರಂಭ ಮಾಡಲಾಗುವುದು’ ಎಂದು ಇದೆ ವೇಳೆ ಜಿಲ್ಲಾಧಿಕಾರಿ ನಿತೀಶ್ ಕೆ ತಿಳಿಸಿದರು.

‘ಹೆಚ್ಚುವರಿಯಾಗಿ ನಾಲ್ಕು ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಇನ್ನುಳಿದ ನಾಲ್ಕು ತಾಲ್ಲೂಕು ಕೇಂದ್ರಗಳಲ್ಲಿ ಅಳವಡಿಸಲಾಗುವುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು ಹೇಳಿದರು.

ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್, ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ್, ರಿಮ್ಸ್ ನಿರ್ದೇಶಕ ಡಾ.ರಮೇಶ, ಒಪೆಕ್ ಆಸ್ಪತ್ರೆಯ ವಿಶೇಷಾಧಿಕಾರಿ ಡಾ.ರಮೇಶ ಸಾಗರ, ರಿಮ್ಸ್ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ.ಕೆ.ಆರ್.ದುರುಗೇಶ, ಹಣಕಾಸು ಅಧಿಕಾರಿ ಹನುಮೇಶ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.