ADVERTISEMENT

ಸಿಂಧನೂರು | ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಿ: ರೈತ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 7:12 IST
Last Updated 28 ಅಕ್ಟೋಬರ್ 2025, 7:12 IST
ಸಿಂಧನೂರಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಸೋಮವಾರ ಮಿನಿವಿಧಾನಸೌಧ ಕಚೇರಿಯ ಮುಂದೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪ್ರತಿಭಟಿಸಿ ಗ್ರೇಡ್-2 ತಹಶೀಲ್ದಾರ್ ಚಂದ್ರಶೇಖರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು
ಸಿಂಧನೂರಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಸೋಮವಾರ ಮಿನಿವಿಧಾನಸೌಧ ಕಚೇರಿಯ ಮುಂದೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪ್ರತಿಭಟಿಸಿ ಗ್ರೇಡ್-2 ತಹಶೀಲ್ದಾರ್ ಚಂದ್ರಶೇಖರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು   

ಸಿಂಧನೂರು: ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಿ ವೈಜ್ಞಾನಿಕ ಸಮಗ್ರ ವೆಚ್ಚಕ್ಕೆ ಅನುಗುಣವಾಗಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಗೊಳಿಸಿ ಸರ್ಕಾರ ಖರೀದಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಸೋಮವಾರ ಸ್ಥಳೀಯ ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದ ಮಾರ್ಗವಾಗಿ ಮಿನಿವಿಧಾನಸೌಧ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

‘ರೈತರ ಉತ್ಪನ್ನಗಳು ಕಟಾವಿಗೆ ಬರುವ ಒಂದು ವಾರ ಮುಂಚಿತವಾಗಿ ಖರೀದಿ ಕೇಂದ್ರ ತೆರೆಯಬೇಕು. ರೈತರ ಬೆಳೆಗಳನ್ನು ಕಡಿಮೆ ದರಕ್ಕೆ ಖರೀದಿಸದಂತೆ ವರ್ತಕರಿಗೆ ಕಟ್ಟುನಿಟ್ಟಿನ ಕಾನೂನು ಜಾರಿ ಮಾಡಬೇಕು. ರೈತರನ್ನು ಕೃಷಿಯಿಂದ ಹೊರದಬ್ಬಿ ಕಾರ್ಪೋರೇಟ್ ಕಂಪನಿ ಕೃಷಿ ಮಾಡಲು ಹೊರಟಿರುವುದನ್ನು ಕೈಬಿಟ್ಟು 1954-55 ರಿಂದ 2013ರ ಎಲ್ಲ ಕಾಯ್ದೆಗಳನ್ನು ಮುಂದುವರಿಸಿ, 2019-20ರ ರೈತ ವಿರೋಧಿ ಕೃಷಿ ಮಸೂದೆಗಳನ್ನು ತಕ್ಷಣ ಹಿಂಪಡೆಯಬೇಕು’ ಎಂದು ರೈತರು ಆಗ್ರಹಿಸಿದರು.

‘ಕೃಷಿಗೆ ಬೆನ್ನೆಲುಬಾಗಿರುವ ಕುರಿ, ಮೇಕೆ, ಜಾನುವಾರುಗಳಿಗೆ ಅನುಗುಣವಾಗಿ ಭೂಮಿ ಮೀಸಲಿರಿಸಬೇಕು. ಆಯಾ ಗ್ರಾಮಗಳಲ್ಲಿರುವ ಅರಣ್ಯ, ಗಾಯರಾಣ, ಗೋಮಾಳ, ಅಮೃತ ಮಹಲ ಮತ್ತು ಕೆರೆಗೆ ಮೀಸಲಿರಿಸಿದ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ವರ್ಗಾಯಿಸಬಾರದು ಮತ್ತು ಹಂಚಿಕೆ ಮಾಡಬಾರದು’ ಎಂದು ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶರಣಪ್ಪ ಮರಳಿ ಒತ್ತಾಯಿಸಿದರು.

ADVERTISEMENT

‘ರೈತರಿಂದ ಒತ್ತಾಯಪೂರ್ವಕ ಸಾಲ ವಸೂಲಾತಿ ಮಾಡದಂತೆ, ನ್ಯಾಯಾಲಯದಲ್ಲಿ ದಾವೆ ಹೂಡದಂತೆ, ಆಸ್ತಿ ಜಪ್ತಿ ಮಾಡದಂತೆ ಮತ್ತು ಸಿಬಿಲ್ ತೆಗೆಯದಂತೆ ರಾಜ್ಯ ಸರ್ಕಾರ ಹಣಕಾಸು ಸಂಸ್ಥೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಆಗ್ರಹಿಸಿದರು.

ಗ್ರೇಡ್-2 ತಹಶೀಲ್ದಾರ್ ಚಂದ್ರಶೇಖರ ಮನವಿ ಪತ್ರ ಸ್ವೀಕರಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ರಾಮಯ್ಯ ಜವಳಗೇರಾ, ಪ್ರಧಾನ ಕಾರ್ಯದರ್ಶಿ ನರಸಪ್ಪ ದೇವಸುಗೂರು, ತಾಲ್ಲೂಕು ಘಟಕದ ಅಧ್ಯಕ್ಷ ನಾಗಪ್ಪ ಬೂದಿವಾಳ, ರಾಯಚೂರು ಅಧ್ಯಕ್ಷ ಚನ್ನಪ್ಪ ಹುಣಸಿಹಾಳ ಹುಡಾ, ಮಸ್ಕಿ ಅಧ್ಯಕ್ಷ ವೆಂಕಟೇಶ ರತ್ನಾಪುರಹಟ್ಟಿ, ಸದಸ್ಯರಾದ ಲಾಲ್‍ಸಾಬ ನಾಡಗೌಡ, ಪರಯ್ಯಸ್ವಾಮಿ, ಕೊಠಾರಿ ಜಯರಾಘವೇಂದ್ರ, ಅಂಬಿಕಾ, ಚಂದ್ರಿಕಾ, ನಾಗವೇಣಿ, ತಿಮ್ಮಣ್ಣ ಭೋವಿ, ಶಿವರಾಜ ಗೌಡೂರು, ಮೌನೇಶ ಕನ್ನಾರಿ, ತಿಮ್ಮಣ್ಣ ಗಿಣಿವಾರ, ವೀರರಾಜು, ವೀರಭದ್ರಪ್ಪ, ವೆಂಕಟೇಶ ಸಂತೆಕೆಲ್ಲೂರು, ವಜ್ರಪ್ಪ, ಹನುಮಂತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.