ಸಿಂಧನೂರು: ‘ಬರಗಾಲದಲ್ಲಿ 11 ದಿನಗಳವರಿಗೆ ಪಂಪ್‍ಸೆಟ್ ಬಂದ್ ಮಾಡಿ ನೂರಾರು ಎಕರೆ ಬೆಳೆ ನಷ್ಟಕ್ಕೆ ಕಾರಣವಾಗಿರುವ ನೀರಾವರಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರೈತ ಸಂಘದ ತಾಲ್ಲೂಕು ಘಟಕದ ವತಿಯಿಂದ ಮಿನಿವಿಧಾನಸೌಧ ಕಚೇರಿಯಲ್ಲಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಗೋಮರ್ಸಿ, ಸುಕಾಲಪೇಟ ಹಾಗೂ ಉದ್ಬಾಳ ಗ್ರಾಮದ ರೈತರ ಮಧ್ಯ ಏತ ನೀರಾವರಿ ವಿಷಯದ ಕುರಿತು ಕಳೆದ 10 ದಿನಗಳ ಹಿಂದೆ ವಿವಾದ ಉಂಟಾಗಿತ್ತು. ಸಣ್ಣ ನೀರಾವರಿ ಅಧಿಕಾರಿಗಳು ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ಸಮಸ್ಯೆ ಪರಿಹರಿಸದೆ ಪಂಪ್‍ಸೆಟ್ ಕೋಣೆಗೆ ಬೀಗ ಹಾಕಿ ನೀರು ಬಂದ್ ಮಾಡಿದ್ದರು. ನೂರಾರು ಎಕರೆಯಲ್ಲಿ ಬೆಳೆದ ಜೋಳ ಇತರೆ ಬೆಳೆ ಒಣಗಿ ನಷ್ಟವಾಗಿದೆ ಎಂದು ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ್ ದೂರಿದರು.
ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ರೈತ ಸಂಘ, ರೈತರೊಂದಿಗೆ ಸಭೆ ನಡೆಸಿ ನೀರು ಬೀಡಲು ಸಣ್ಣ ನೀರಾವರಿ ಅಧಿಕಾರಿಗಳಿಗೆ ಸೂಚನೆ ಕೊಟ್ಟರು. ಡಿವೈಎಸ್ಪಿ ಬಿ.ಎಸ್.ತಳವಾರ ಹಾಗೂ ಗ್ರಾಮೀಣ ಠಾಣೆಯ ಇನ್‌ಸ್ಪೆಕ್ಟರ್ ಭರತ್‍ರಡ್ಡಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಒತ್ತಡ ಹಾಕಿದರು.
ಬಳಿಕ ಶಾಸಕರ ನಿವಾಸಕ್ಕೆ ತೆರಳಿ ಮನವಿ ಪತ್ರ ಸಲ್ಲಿಸಿದಾಗ, ಶಾಸಕ ಹಂಪನಗೌಡ ಬಾದರ್ಲಿ ಅವರು ಕೂಡ ಅಧಿಕಾರಿಗಳಿಗೆ ನೀರು ಹರಿಸಲು ಸೂಚನೆ ಕೊಟ್ಟರು.
ಡಿ.ಎಚ್.ಪೂಜಾರ್ ಮಾತಣಾಡಿ, ‘ಸಣ್ಣ ನೀರಾವರಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ತೆನೆ ಬಿಡುವ ಹಂತದಲ್ಲಿದ್ದ ಜೋಳ ನಷ್ಟವಾಗಿದೆ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಪಾಟೀಲ ಭೇರಿಗಿ, ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು, ಜಿಲ್ಲಾ ಅಧ್ಯಕ್ಷ ಬಿ.ಎನ್.ಯರದಿಹಾಳ, ಮುಖಂಡರಾದ ಎಂ.ಎಸ್.ರಾಜಶೇಖರ, ಗೋವಿಂದಪ್ಪ ಸುಕಾಲಪೇಟ, ಶಿವಪ್ಪ ಸುಕಾಲಪೇಟ, ಮಲ್ಲಯ ಸುಕಾಲಪೇಟ, ಹಿರಿಲಿಂಗಪ್ಪ ಸುಕಾಲಪೇಟ, ವೆಂಕಟೇಶ ಉದ್ಬಾಳ, ಬಾಲಾಜಿ ಉದ್ಬಾಳ, ಬಸವರಾಜ ಉದ್ಬಾಳ, ಯಂಕಪ್ಪ ಉದ್ಬಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.