ADVERTISEMENT

ಯೋಜನೆಗಳ ಸದುಪಯೋಗ ಪಡೆದು ಸ್ವಾವಲಂಬಿಯಾಗಿ: ಸಂಸದ ರಾಜಾ ಅಮರೇಶ್ವರ ನಾಯಕ

ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯ ಕಾರ್ಯಾಗಾರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 15:57 IST
Last Updated 29 ಸೆಪ್ಟೆಂಬರ್ 2022, 15:57 IST
ರಾಯಚೂರಿನ ಕನ್ನಡ ಭವನದಲ್ಲಿ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಗುರುವಾರ ಆಯೋಜಿಸಿದ್ದ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯ ಕಾರ್ಯಾಗಾರವನ್ನು ಸಂಸದ ರಾಜಾ ಅಮರೇಶ್ವರ ನಾಯಕ ಉದ್ಘಾಟಿಸಿ ಮಾತನಾಡಿದರು.
ರಾಯಚೂರಿನ ಕನ್ನಡ ಭವನದಲ್ಲಿ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಗುರುವಾರ ಆಯೋಜಿಸಿದ್ದ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯ ಕಾರ್ಯಾಗಾರವನ್ನು ಸಂಸದ ರಾಜಾ ಅಮರೇಶ್ವರ ನಾಯಕ ಉದ್ಘಾಟಿಸಿ ಮಾತನಾಡಿದರು.   

ರಾಯಚೂರು: ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಅವುಗಳಲ್ಲಿ ಒಂದಾದ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಪಿಎಂಇಜಿಪಿ)ಯಂತಹ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಜಿಲ್ಲೆಯ ಜನರು ಸ್ವಾಲಂಬಿಗಳಾಗಿ ಬದುಕಬೇಕು ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ನಗರದ ಕನ್ನಡ ಭವನದಲ್ಲಿ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಗುರುವಾರ ಆಯೋಜಿಸಿದ್ದ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸ್ವ-ಉದ್ಯೋಗ ಆರಂಭಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವಾರು ಯೋಜನೆಗಳ ಮೂಲಕ ನಿರುದ್ಯೋಗಿಗಳಿಗೆ ಹಾಗೂ ಉದ್ಯಮ ಆರಂಭಿಸುವವರಿಗೆ ಅನುಕೂಲ ಮಾಡಿಕೊಟ್ಟಿದೆ. ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಅರಿವು-ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ ಗ್ರಾಮೀಣರಲ್ಲೂ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ADVERTISEMENT

ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸದಸ್ಯ ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿ, ಸಣ್ಣ-ಅತಿ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ತರಬೇತಿ ಕೇಂದ್ರಗಳು ಇದ್ದು, ಅವುಗಳಲ್ಲಿ ತರಬೇತಿ ಪಡೆದು ಉದ್ದಿಮೆಯನ್ನು ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳ ಪಾತ್ರ ಮಹತ್ವದ್ದಾಗಿರುತ್ತದೆ. ಉತ್ತಮ ಘಟಕಗಳಿಗೆ ಬ್ಯಾಂಕ್‌ಗಳು ಪ್ರೋತ್ಸಾಹ ನೀಡುತ್ತಿವೆ ಎಂದರು.

ಪ್ರಾಸ್ತಾವಿಕವಾಗಿ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗದ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಕೆ.ರಾಯಣ್ಣ ಮಾತನಾಡಿ, ಈ ಯೋಜನೆಯಲ್ಲಿ ಸಿಗಬಹುದಾದ ಸಾಲ ಸೌಲಭ್ಯಗಳ ಅನುದಾನ ವಿವರ, ಸ್ಥಾಪಿಸಬಹುದಾದ ಸೇವಾ ಉದ್ದಿಮೆಗಳು, ಉತ್ಪಾದನಾ ಉದ್ದಿಮೆಗಳು ಹಾಗೂ ಯೋಜನೆಯನ್ನು ವಿವಿಧ ಇಲಾಖೆಗಳು ಅನುಷ್ಠಾನಗೊಳಿಸುತ್ತಿರುವ ಬಗ್ಗೆ ಹಾಗೂ ಬ್ಯಾಂಕ್‌ಗಳ ಮೂಲಕ ಸಾಲ ನೀಡಿಕೆ ಕುರಿತು ಮಾಹಿತಿ ನೀಡಿದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಬಾಬು ಬಳಗಾನೂರ ಮಾತನಾಡಿ, ಕೇಂದ್ರ ಸರ್ಕಾರದ ಪಿ.ಎಂ.ಇ.ಜಿ.ಪಿ. ಯೋಜನೆಯಡಿಲ್ಲಿ ಬಹಳಷ್ಟು ಅರ್ಜಿಗಳು ಘಟಕಕ್ಕೆ ಬಂದಿದ್ದು, ಅವುಗಳಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸಾಲ ನೀಡಿಲು ಅಗತ್ಯ ಕ್ರಮ ವಹಿಸಿಲಾಗುತ್ತಿದೆ. ಅಭ್ಯರ್ಥಿಗಳು ಯಾವ ಉದ್ದಿಮೆಯಲ್ಲಿ ಅನುಭವ ಇದೆ. ಆ ಉದ್ದಿಮೆಗೆ ಮಾತ್ರ ಅರ್ಜಿ ಹಾಕಬೇಕು ಎಂದು ಹೇಳಿದರು.

ಎಸ್.ಬಿ.ಐ. ಪ್ರಾದೇಶಿಕ ಬ್ಯಾಂಕಿನ ಪ್ರತಿನಿಧಿ ರೆಡ್ಡಿ ಕುಮಾರ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕರು ಷಡಕ್ಷರಿ ಗೌಡ, ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಮಂಜುನಾಥ, ಎಸ್.ಬಿ.ಐ. ಆರ್‌ಸೆಟ್ ವಿಜಯ ಕುಮಾರ ಬಡಿಗೇರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.