ADVERTISEMENT

‘ಕಾರ್ಯಕ್ರಮ ಆಯೋಜನೆಗೆ ಪೂರ್ವಾನುಮತಿ ಬೇಕು’

₹50 ಸಾವಿರ ಮೇಲ್ಪಟ್ಟ ನಗದು ಹಣಕ್ಕೆ ದಾಖಲೆ ಅಗತ್ಯ: ಡಿಸಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 16:16 IST
Last Updated 29 ಮಾರ್ಚ್ 2023, 16:16 IST
ಎಲ್‌.ಚಂದ್ರಶೇಖರ್‌ ನಾಯಕ
ಎಲ್‌.ಚಂದ್ರಶೇಖರ್‌ ನಾಯಕ   

ರಾಯಚೂರು: ಜಿಲ್ಲೆಯಾದ್ಯಂತ ಮಾರ್ಚ್‌ 29 ರಿಂದಲೇ ಚುನಾವಣೆ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಾಗಿದ್ದು, ಯಾವುದೇ ಕಾರ್ಯಕ್ರಮಗಳು, ಪ್ರತಿಭಟನೆಗಳನ್ನು ನಡೆಸುವುದಕ್ಕೆ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾ ಚುನಾವಣಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರ ಬೆಳಿಗ್ಗೆ 11.30 ರೊಳಗಾಗಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ನೀಡಿದ ವಾಹನ ಸೌಲಭ್ಯ ಮತ್ತು ಸರ್ಕಾರಿ ಯಾವುದೇ ಕಟ್ಟಡಗಳನ್ನು ಹಿಂದಕ್ಕೆ ಪಡೆದುಕೊಳ್ಳಲಾಗುವುದು. ಚುನಾವಣೆ ನೀತಿ ಸಂಹಿತೆ ಜಾರಿಗೆ ಸಂಬಂಧಿಸಿದಂತೆ ವಿವಿಧ ತಂಡಗಳನ್ನು ರಚಿಸಿದ್ದು, ಅವೆಲ್ಲವೂ ಕಾರ್ಯಪ್ರವೃತ್ತವಾಗಿವೆ ಎಂದರು.

ಜಿಲ್ಲೆಯಲ್ಲಿ ಒಟ್ಟು 1,840 ಮತಗಟ್ಟೆಗಳಿದ್ದು, ಎಲ್ಲ ಕಡೆಗಳಲ್ಲೂ ಮೂಲ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು 16.18 ಲಕ್ಷ ಮತದಾರರಿದ್ದು, ಅದರಲ್ಲಿ 7.9 ಲಕ್ಷ ಪುರುಷ ಮತದಾರರು, 8.21 ಲಕ್ಷ ಮಹಿಳಾ ಮತದಾರರು ಹಾಗೂ 260 ತೃತೀಯ ಲಿಂಗಿ ಮತದಾರರು ಇದ್ದಾರೆ. 13 ಅನಿವಾಸಿ ಭಾರತೀಯ ಮತದಾರರು ಮತ್ತು 281 ಅಂಚೆ ಮತದಾರರು ಇದ್ದಾರೆ. ಮತದಾನ ನಡೆಯುವ ಮೇ 10 ದಿನದ ಎರಡು ದಿನಗಳ ಮೊದಲು ದಿನಾಂಕದವರೆಗೂ ಮತದಾರ ಚೀಟಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದು. ಹೊಸ ಸೇರ್ಪಡೆ ಹಾಗೂ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

ADVERTISEMENT

18,071 ಅಂಗವಿಕಲ ಮತದಾರರಿದ್ದಾರೆ. 24 ಸಾವಿರ ಮತದಾರರು 80 ವರ್ಷ ಮೇಲ್ಪಟ್ಟವರಿದ್ದಾರೆ. ಅಂಗವಿಕಲರು ಹಾಗೂ 80 ವರ್ಷ ಮೇಲ್ಪಟ್ಟವರಿಗೆಲ್ಲ 12ಬಿ ಅರ್ಜಿ ನಮೂನೆ ಒದಗಿಸಲಾಗುವುದು. ಅಗತ್ಯ ಏನಿಸಿದವರು ಅರ್ಜಿ ಸಲ್ಲಿಸಿದರೆ ಅವರ ಮನೆಗಳಿಗೇ ಚುನಾವಣಾ ಸಿಬ್ಬಂದಿ ತೆರಳಿ ಮತದಾನ ಸಂಗ್ರಹಿಸಿಕೊಳ್ಳುವರು. ಮತದಾನ ನಡೆಯುವ ಐದು ದಿನಗಳ ಮೊದಲೇ ಇಂಥವರಿಂದ ಮತಗಳನ್ನು ಸಂಗ್ರಹಿಸಲಾಗುವುದು. ಇದು ಕೂಡಾ ಗುಪ್ತ ಮತದಾನವಾಗಿರುತ್ತದೆ ಎಂದು ಹೇಳಿದರು.

ಪ್ರತಿಯೊಂದು ವಿಧಾನಸಭೆ ಕ್ಷೇತ್ರಕ್ಕೆ ಚುನಾವಣಾ ಅಧಿಕಾರಿ ಹಾಗೂ ಸಹಾಯಕ ಚುನಾವಣಾ ಅಧಿಕಾರಿಯನ್ನು ನೇಮಿಸಲಾಗಿದ್ದು, ಇದಲ್ಲದೆ ಚುನಾವಣೆ ನೀತಿ ಸಂಹಿತೆ ಕುರಿತು ನಿಗಾ ವಹಿಸಲು 68 ಫ್ಲೈಯಿಂಗ್‌ ಸ್ಕ್ವಾಡ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಭ್ಯರ್ಥಿಗಳ ಖರ್ಚು ಹಾಗೂ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತು ಮೊತ್ತ ಇತ್ಯಾದಿ ಅಂಕಿಸಂಖ್ಯೆಗಳನ್ನು ಕಲೆಹಾಕಲು ಅಂಕಿ–ಅಂಶ ಜಾಗೃತಿ ತಂಡಗಳನ್ನು ಕೂಡಾ ಮಾಡಲಾಗಿದೆ. ಇದಲ್ಲದೆ ಒಟ್ಟು 23 ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗುತ್ತಿದ್ದು, ಅಲ್ಲಿ ವಿಡಿಯೋ ಚಿತ್ರೀಕರಣ ತಂಡವೂ ಇರಲಿದೆ ಎಂದು ತಿಳಿಸಿದರು.

₹50 ಸಾವಿರ ಮೇಲ್ಪಟ್ಟು ನಗದು ಕಂಡುಬಂದರೆ, ಅದಕ್ಕೆ ಸೂಕ್ತ ದಾಖಲೆಗಳನ್ನು ತೋರಿಸಬೇಕು. ದಾಖಲೆ ತೋರಿಸುವವರೆಗೂ ಅದು ಸಂಬಂಧಿಸಿದ ವಿಭಾಗದಲ್ಲಿ ಇರಿಸಲಾಗುತ್ತದೆ. ಸಾರ್ವಜನಿಕವಾಗಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ಪೂರ್ವಾನುಮತಿ ಪಡೆದುಕೊಳ್ಳಲೇ ಬೇಕು. ಪ್ರತಿಭಟನೆಗಳನ್ನು ಮಾಡುವಂತಿಲ್ಲ. ಪ್ರತಿಭಟನೆ ಮಾಡುವಂತಿದ್ದರೆ ಮೊದಲೇ ಅನುಮತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್‌ ಕುರೇರ ಮಾತನಾಡಿ, ಯಾವುದೇ ಅಭ್ಯರ್ಥಿ ಪರವಾಗಿ ಮಾಧ್ಯಮಗಳಲ್ಲಿ ಪ್ರಕಟವಾಗುವ ಪೇಯ್ಡ್‌ ನ್ಯೂಜ್‌ಗಳ ಬಗ್ಗೆ ನಿಗಾ ವಹಿಸುವುದಕ್ಕೆ ಸಮಿತಿ ಮಾಡಲಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಒಂದು ಮಹಿಳಾ ವಿಶೇಷ ಮತಗಟ್ಟೆ ಹಾಗೂ ಮಾದರಿ ಮತಗಟ್ಟೆಗಳನ್ನು ಮಾಡಲಾಗುವುದು ಎಂದರು.

ಬೇಸಿಗೆಯನ್ನು ಗಮನದಲ್ಲಿಟ್ಟುಕೊಂಡು ಮತಗಳಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಕಲ್ಪಿಸುವುದಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಮಾತನಾಡಿ, ಚುನಾವಣೆ ನೀತಿ ಸಂಹಿತೆ ಹಾಗೂ ನಿಯಮಗಳ ಕುರಿತು ಈಗಾಗಲೇ ಎರಡು ಸುತ್ತಿನಲ್ಲಿ ಪೊಲೀಸರಿಗೆ ತರಬೇತಿ ನೀಡಲಾಗಿದೆ. ಸಾರ್ವಜನಿಕರು ಯಾವುದೇ ಅಮಿಷಕ್ಕೆ ಒಳಗಾಗದೆ ಮತದಾನ ಮಾಡಬೇಕು. ದೂರು ಸಲ್ಲಿಸಿದರೆ ತಮಗೆ ತೊಂದರೆ ಬರುತ್ತದೆ ಎಂದು ಸಾರ್ವಜನಿಕರು ಆತಂಕ ಪಡಬೇಕಿಲ್ಲ. ದೂರುದಾರರ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿರುವ ಎಲ್ಲಾ 1679 ರೌಡಿ ಸೀಟರುಗಳಿಗೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ಸುಮಾರು 1400 ರೌಡಿ ಸೀಟರ್‌ಗಳಿಂದ ಬಾಂಡ್‌ ಪಡೆದುಕೊಳ್ಳಲಾಗಿದೆ. ಇಂತಹ ವ್ಯಕ್ತಿಗಳು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಕಾನೂನು ಕ್ರಮ ಜರುಗಿಸಲಾಗುವುದು. ಸುಮಾರು 1,200 ಲೀಟರ್ ಅಕ್ರಮ ಮದ್ಯ ಜಪ್ತಿ ಮಾಡಲಾಗಿದೆ. ಇದುವರೆಗೂ ₹15 ಲಕ್ಷದವರೆಗೂ ದಾಖಲೆಯಿಲ್ಲದ ಹಣವನ್ನು ಜಪ್ತಿ ಮಾಡಲಾಗಿದ್ದು, ದಾಖಲೆ ತೋರಿಸಿದರೆ ಮರಳಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.