ADVERTISEMENT

ಕವಿತಾಳ: ಶಾಲೆಯಲ್ಲಿ ನೀರಿನ ಕೊರತೆ, ಮೂರು ತಿಂಗಳಿಂದ ಟ್ಯಾಂಕರ್‌ ನೀರು ಪೂರೈಕೆ

ಮಂಜುನಾಥ ಎನ್ ಬಳ್ಳಾರಿ
Published 12 ಮಾರ್ಚ್ 2024, 5:59 IST
Last Updated 12 ಮಾರ್ಚ್ 2024, 5:59 IST
ಕವಿತಾಳ ಸಮೀಪದ ಪಾಮನಕಲ್ಲೂರು ಸರ್ಕಾರಿ ಪ್ರೌಢಶಾಲೆಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿರುವುದು.
ಕವಿತಾಳ ಸಮೀಪದ ಪಾಮನಕಲ್ಲೂರು ಸರ್ಕಾರಿ ಪ್ರೌಢಶಾಲೆಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿರುವುದು.   

ಕವಿತಾಳ: ದೀಪದ ಕೆಳಗೆ ಕತ್ತಲು ಎನ್ನುವಂತೆ ಹತ್ತಿರದಲ್ಲಿಯೇ ಇಡೀ ಗ್ರಾಮಕ್ಕೆ ನೀರು ಪೂರೈಸುವ ಮೇಲ್ತೊಟ್ಟಿ ಇದ್ದರೂ ಸಮೀಪದ ಪಾಮನಕಲ್ಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹನಿ ನೀರಿಗೆ ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಮಳೆ ಕೊರತೆಯಿಂದ ಅಂತರ್ಜಲ ಕುಸಿತ ಮತ್ತು ದುರಸ್ತಿ ಮಾಡಲು ಸಾಧ್ಯವಾಗದಂತೆ ಕೊಳವೆಬಾವಿಯಲ್ಲಿ ಪೈಪ್‌ ಮುರಿದು ಮೋಟಾರು ಸಿಕ್ಕಿಹಾಕಿಕೊಂಡ ಪರಿಣಾಮ ಮೂರು ತಿಂಗಳಿಂದ ಶಾಲೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಎರಡು ದಿನಗಳಿಗೆ ಒಂದು ಟ್ಯಾಂಕರ್‌ ಬಳಕೆ ನೀರಿನ ಅಗತ್ಯವಿದ್ದು ಅಂದಾಜು ₹ 1 ಸಾವಿರ ಮತ್ತು ಶುದ್ದ ಕುಡಿಯುವ ನೀರು ಪೂರೈಸಲಾಗುತ್ತಿದೆ.

8.9 ಮತ್ತು10ನೇ ತರಗತಿಯ ಅಂದಾಜು 322 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಮಕ್ಕಳಿಗೆ ಕುಡಿಯಲು ಶುದ್ದ ನೀರು, ಬಿಸಿಯೂಟ ತಯಾರಿಸಲು, ಅಡುಗೆ ಪಾತ್ರೆಗಳು, ಊಟದ ತಟ್ಟೆ ತೊಳೆಯಲು ಮತ್ತು ಶೌಚಾಲಯ ಬಳಕೆಗೆ ನೀರಿನ ಕೊರತೆ ಕಾಡುತ್ತಿದೆ.

ADVERTISEMENT

ಶಾರ್ಟ್‌ ಸರ್ಕಿಟ್‌ನಿಂದಾಗಿ ವೈರ್‌ಗಳು ಸುಟ್ಟು ಹೋಗಿದ್ದು ಹೊಸ ಕಟ್ಟಡಗಳಲ್ಲಿ ವಿದ್ಯುತ್‌ ವ್ಯವಸ್ಥೆ ಇಲ್ಲದಂತಾಗಿದೆ. ಹೀಗಾಗಿ ಪ್ರೊಜೆಕ್ಟರ್‌ ಮೂಲಕ ಮಕ್ಕಳಿಗೆ ಮಾಹಿತಿ ನೀಡಲು ಮತ್ತು ವಿದ್ಯುತ್‌ ಉಪಕರಣಗಳ ಬಳಕೆ ಸಾಧ್ಯವಾಗುತ್ತಿಲ್ಲ. ಶಾಲಾ ಕಟ್ಟಡ ಗುಡ್ಡಕ್ಕೆ ಹೊಂದಿಕೊಂಡಿದ್ದು ತಡೆಗೋಡೆ ನಿರ್ಮಿಸಿದ್ದರೂ ಗೇಟ್‌ ಅಳವಡಿಸದ ಕಾರಣ ದನಕರುಗಳು ನುಗ್ಗಿ ಗಿಡಗಳನ್ನು ಹಾಳು ಮಾಡುತ್ತಿವೆ, ಕಿಡಿಗೇಡಿಗಳ ಹಾವಳಿಯೂ ಇದೆ.

ಹಳೆಯ ಐದು ಕೊಠಡಿಗಳ ಛಾವಣಿ ಸಿಮೆಂಟ್‌ ಉದುರುತ್ತಿದ್ದು ಮಳೆಗಾಲದಲ್ಲಿ ಸೋರುತ್ತವೆ. ಸದ್ಯ ಎರಡರಲ್ಲಿ ತರಗತಿ ನಡೆಯುತ್ತವೆ. ಉಳಿದ ಮೂರನ್ನು ಬಿಸಿಯೂಟದ ಆಹಾರ ಧಾನ್ಯ, ಕ್ರೀಡಾ ಸಾಮಗ್ರಿ ಮತ್ತು ಶಿಕ್ಷಕರು ಬಳಕೆ ಮಾಡುತ್ತಿದ್ದಾರೆ.

ʼಬಳಕೆಗೆ ಹಾಗೂ ಮಕ್ಕಳಿಗೆ ಶುದ್ದ ಕುಡಿಯುವ ನೀರು, ಹೈಟೆಕ್‌ ಶೌಚಾಲಯ, ಗೇಟ್‌, ಕಮಾನು, ವಿದ್ಯುತ್‌ ಸಂಪರ್ಕ, ಹೆಚ್ಚುವರಿ ಕೊಠಡಿಗಳ ಮಂಜೂರು ಮಾಡುವುದು ಮತ್ತು ಶಾಲೆ ನಿರ್ಮಿಸಿದ ಜಾಗವನ್ನು ಶಾಲೆಯ ಹೆಸರಿಗೆ ನೋಂದಣಿಗೆ ಕ್ರಮ ಕೈಗೊಳ್ಳಬೇಕುʼ ಎಂದು ಎಸ್‌ ಡಿ ಎಂಸಿ ಪದಾಧಿಕಾರಿಗಳು ಈಚೆಗೆ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.

ʼಕೆಲವು ದಿನ ಗ್ರಾಮ ಪಂಚಾಯಿತಿಯವರು ಟ್ಯಾಂಕರ್‌ ನೀರು ಪೂರೈಸಿದ್ದಾರೆ, ಸದ್ಯ ನಾವು ತರಿಸಿಕೊಳ್ಳುತ್ತಿದ್ದೇವೆ, ಕೆರೆ ನೀರು ಪೂರೈಕೆಗೆ ಪೈಪ್‌ ಅಳವಡಿಸಲು ಶಾಸಕರು ಅಭಿವೃದ್ದಿ ಅಧಿಕಾರಿಗೆ ಸೂಚಿಸಿದ್ದಾರೆ ಮತ್ತು ಕೊಳವೆಬಾವಿ ಕೊರೆಯಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆʼ ಎಂದು ಮುಖ್ಯ ಶಿಕ್ಷಕ ಮಾರ್ಟಿನ್‌ ಅಮಲ್‌ ರಾಜ್‌ ಹೇಳಿದರು.

ಕವಿತಾಳ ಸಮೀಪದ ಪಾಮನಕಲ್ಲೂರು ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಕುಡಿಯಲು ಟ್ಯಾಂಕರ್‌ ಮೂಲಕ ಶುದ್ದ ಕುಡಿಯುವ ನೀರು ಪೂರೈಸುತ್ತಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.