ADVERTISEMENT

‘ಗುರುವಿಗಿದೆ ಬದಲಿಸುವ ಶಕ್ತಿ’

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 5:17 IST
Last Updated 18 ಜನವರಿ 2026, 5:17 IST
ಹೂವಿನಹೆಡಗಿಯ ಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಶಿಕ್ಷಕರ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು
ಹೂವಿನಹೆಡಗಿಯ ಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಶಿಕ್ಷಕರ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು   

ದೇವದುರ್ಗ: ‘ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಜಗತ್ತು ಬದಲಾವಣೆ ಮಾಡಬಹುದು. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಉತ್ತಮ ಶಿಕ್ಷಕರಾಗಿ ದೇಶಕ್ಕೆ ಸಂಸ್ಕಾರ, ಸನ್ನಡತೆಯ ಮಾನವ ಸಂಪನ್ಮೂಲ ಕೊಡುಗೆಯಾಗಿ ನೀಡಿ’ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.

ತಾಲ್ಲೂಕಿನ ಹೂವಿನಹೆಡಗಿಯ ಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವದ್ದಾಗಿದೆ. ನಮ್ಮಲ್ಲಿರುವ ಅಜ್ಞಾನ ಹೊರಗೆ ಹಾಕಲು ಶಿಕ್ಷಕರು ಮಾರ್ಗದರ್ಶಿಯಾಗುತ್ತಾರೆ. ಎಲ್ಲಾ ವೃತ್ತಿಗೆ ಮೂಲ ಶಿಕ್ಷಣ ವೃತ್ತಿ’ ಎಂದರು.

ADVERTISEMENT

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಲಿ ಮಾತನಾಡಿ,‘ಇತ್ತೀಚೆಗೆ ಸರ್ಕಾರ ಶಿಕ್ಷಕರಿಗೆ ಹೆಚ್ಚು ಬೋಧಕೇತರ ಕಾರ್ಯಚಟುವಟಿಕೆ ನೀಡುತ್ತಿದ್ದು, ಮಕ್ಕಳಿಗೆ ಉತ್ತಮ ಪಾಠ ಮಾಡಲಾಗುತ್ತಿಲ್ಲ. ಶಿಕ್ಷಕರ ಮೇಲಿನ ಜವಾಬ್ದಾರಿ ಕಡಿಮೆ ಮಾಡುವಂತೆ ಸದನದಲ್ಲಿ ಧ್ವನಿ ಎತ್ತಿ’ ಎಂದು ಶಾಸಕಿಗೆ ಮನವಿ ಮಾಡಿದರು.

ಪ್ರಾಥಮಿಕ ಶಾಲಾ ವಿಭಾಗದಿಂದ 51 ಶಿಕ್ಷಕರು, ಪ್ರೌಢಶಾಲಾ ವಿಭಾಗದಿಂದ 11 ಮತ್ತು ಅತಿಥಿ ಶಿಕ್ಷಕರ ವಿಭಾಗದಿಂದ 29 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿವೃತ್ತಿ ಹೊಂದಿದ 25 ಶಿಕ್ಷಕರಿಗೆ ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ, ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ, ಜಿಲ್ಲಾ ಉಪನಿರ್ದೇಶಕ ಕೆ.ಡಿ.ಬಡಿಗೇರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಲಕ್ಷ್ಮಣ ಜ್ಯೋತಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಮಲ್ಲಿಕಾರ್ಜುನ, ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ.ಕೆ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ (ಗ್ರೇಡ್‌–2) ರಾಜಕುಮಾರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತ್ರಾಯ ಶಾಖೆ, ಎಪಿಎಂಸಿ ಅಧ್ಯಕ್ಷ ಆದನಗೌಡ ಪಾಟೀಲ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಗೌಡ, ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪದಾಧಿಕಾರಿಗಳು, ಶಿಕ್ಷಕರು ಮತ್ತು ವಿವಿಧ ಇಲಾಖೆಗಳ ತಾಲ್ಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.