ADVERTISEMENT

ಲಿಂಗಸುಗೂರು: ಮುಖ್ಯನಾಲೆ ಅಧುನೀಕರಣ ಕಾಮಗಾರಿ ಅಪೂರ್ಣ

ನಾರಾಯಣಪುರ ಬಲದಂಡೆ ನಾಲೆ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 22 ಮೇ 2024, 6:23 IST
Last Updated 22 ಮೇ 2024, 6:23 IST
ನಾರಾಯಣಪುರ ಬಲದಂಡೆ ಮುಖ್ಯನಾಲೆ 14.400 ಕಿ.ಮೀನಲ್ಲಿ ನಿರ್ಮಿಸಿದ ಅಂಡರ್ ಟನಲ್ ದುರಸ್ತಿ ಮಾಡದ್ದರಿಂದ ಮುಖ್ಯಕಾಲುವೆ ಮಣ್ಣಿನ ಏರಿ ಭಾಗಶಃ ಕುಸಿದಿರುವುದು
ನಾರಾಯಣಪುರ ಬಲದಂಡೆ ಮುಖ್ಯನಾಲೆ 14.400 ಕಿ.ಮೀನಲ್ಲಿ ನಿರ್ಮಿಸಿದ ಅಂಡರ್ ಟನಲ್ ದುರಸ್ತಿ ಮಾಡದ್ದರಿಂದ ಮುಖ್ಯಕಾಲುವೆ ಮಣ್ಣಿನ ಏರಿ ಭಾಗಶಃ ಕುಸಿದಿರುವುದು   

ಲಿಂಗಸುಗೂರು: ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಮತ್ತು ವಿತರಣಾ ನಾಲೆಗಳ ಅಧುನೀಕರಣ ಕಾಮಗಾರಿಯ ಅವಧಿ ಮುಗಿದು ಭಾಗಶಃ ಬಿಲ್‍ ಕೂಡ ಪಾವತಿಸಲಾಗಿದೆ. ಆದರೂ ಬಹುತೇಕ ಕಾಮಗಾರಿಗಳು ಅಪೂರ್ಣ ಸ್ಥಿತಿಯಲ್ಲಿವೆ.

ಮುಖ್ಯ ನಾಲೆ ಅಧುನೀಕರಣಕ್ಕೆ ₹980 ಕೋಟಿ ಮತ್ತು ವಿತರಣಾ ನಾಲೆ ಮತ್ತು ಹೊಲಗಾಲುವೆಗಳ ಅಧುನೀಕರಣಕ್ಕೆ ₹1,444 ಕೋಟಿ ಸೇರಿ ಒಟ್ಟು ₹2,424 ಕೋಟಿ ಪ್ರತ್ಯೇಕ ಗುತ್ತಿಗೆದಾರಿಕೆ ನೀಡಲಾಗಿತ್ತು. 0 ಕಿ.ಮೀ ದಿಂದ 95ನೇ ಕಿ.ಮೀ ಮುಖ್ಯ ನಾಲೆ ಮತ್ತು ಈ ವ್ಯಾಪ್ತಿಯ ವಿತರಣಾ ಮತ್ತು ಹೊಲಗಾಲುವೆ ಅಧುನೀಕರಣಕ್ಕೆ ಹಸಿರು ನಿಶಾನೆ ತೋರಿಸಲಾಗಿತ್ತು.

ಮುಖ್ಯ ಕಾಲುವೆಯ 11.500 ಕಿ.ಮೀ ನಿಂದ 12ನೇ ಕಿ.ಮೀವರೆಗೆ ಹಾಗೂ 25.500 ಕಿ.ಮೀದಿಂದ 26ನೇ ಕಿ.ಮೀವರೆಗೆ ಅಧುನೀಕರಣ ಕಾಮಗಾರಿ ಕೈಗೆತ್ತಿಕೊಂಡ ಕುರುಹುಗಳೇ ಕಾಣಸಿಗುತ್ತಿಲ್ಲ. 18ನೇ ಕಿ.ಮೀ ಅಕ್ವಾಡೆಕ್ಟ್ ಮತ್ತು ಅದರ ಮೇಲಿನ ಪರಿವೀಕ್ಷಣಾ ರಸ್ತೆ ದುರಸ್ತಿ, ಹೊರ ಮೈ ಕಲ್ಲು ಪಿಚ್ಚಿಂಗ್‍ ಮಾಡದಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ.

ADVERTISEMENT

ಮುಖ್ಯನಾಲೆ 12.800 ಕಿ.ಮೀ ಮತ್ತು 14.400 ಕಿ.ಮೀನಲ್ಲಿ ಮುಖ್ಯನಾಲೆ ಕೆಳಭಾಗದಲ್ಲಿ ಜಮೀನು ಮತ್ತು ಹಳ್ಳದ ನೀರು ಹರಿಯಲು ನಿರ್ಮಿಸಿದ ಅಂಡರ್ ಟನಲ್‍ ಮೇಲ್ಭಾಗದ ಕಾಲುವೆ ಮಣ್ಣಿನ ಏರಿ ಕುಸಿದು ಮುಖ್ಯ ನಾಲೆ ಕುಸಿಯುವ ಭೀತಿ ಎದುರಾಗಿದೆ. ಗಿಡ, ಮರ, ಮುಳ್ಳುಕಂಟಿ ಬೆಳೆದು ಸಂಕಷ್ಟ ತಂದೊಡ್ಡಿದೆ ಎಂದು ರೈತ ಚಂದ್ರಶೇಖರ ನಾಯ್ಕ ದೂರಿದ್ದಾರೆ.

ಬ್ಲಾಸ್ಟಿಂಗ್‍, ಮರಂ ಬಳಕೆ, ಕಬ್ಬಿಣ ಸರಳು ಬಳಸಿ ಕಾಂಕ್ರಿಟ್‍ ಲೈನಿಂಗ್‍, ಸರ್ವೀಸ್‍ ರಸ್ತೆಗಳ ಸುಧಾರಣೆ, ಕಾಲುವೆಗೆ ಅಡ್ಡಲಾಗಿ ನಿರ್ಮಿಸಿದ ಸಂಪರ್ಕ ಸೇತುವೆ ದುರಸ್ತಿ ಹೆಸರಲ್ಲಿ ಕೋಟ್ಯಂತರ ಹಣ ಲೂಟಿ ಹೊಡೆದಿರುವ ಬಗ್ಗೆ ಪ್ರಗತಿಪರ ಸಂಘಟನೆಗಳು ದೂರು ನೀಡಿವೆ. ಲೋಕಾಯುಕ್ತರು, ಸದನ ಸಮಿತಿ ತನಿಖೆಗೆ ಬಂದು ಹೋಗಿದೆ.

ಆದರೆ, ಮುಖ್ಯ ನಾಲೆಗುಂಟ ನಿರ್ಮಿಸಿಬೇಕಿದ್ದ ಸೂಪರ್ ಪ್ಯಾಸೇಜ್‍ ಕಾಮಗಾರಿ ಎಲ್ಲಿಯೂ ಕೈಗೆತ್ತಿಕೊಂಡಿಲ್ಲ. ಅಂಡರ್ ಟನಲ್‍, ನ್ಯಾಚ್ಯುರಲ್‍ ಡ್ರೈನೇಜ್‍, ಅಕ್ವಾಡೆಕ್ಟ್‌ ಕಾಮಗಾರಿ ಕೈಗೆತ್ತಿಕೊಳ್ಳದೆ ಹೋಗಿರುವುದು ಅಧುನೀಕರಣಕ್ಕೆ ಕಪ್ಪು ಮಸಿ ಬಳಿದಂತಾಗಿದೆ.

ನಾರಾಯಣಪುರ ಬಲದಂಡೆ ಮುಖ್ಯನಾಲೆ 12.800 ಕಿ.ಮೀನಲ್ಲಿ ನಿರ್ಮಿಸಿದ ಅಂಡರ್ ಟನಲ್ ದುರಸ್ತಿ ಮಾಡದ್ದರಿಂದ ಮುಖ್ಯಕಾಲುವೆ ಮಣ್ಣಿನ ಏರಿ ಕುಸಿದು ಗಿಡಮರ ಬೆಳೆದು ಅಪಾಯ ತಂದೊಡ್ಡಿರುವುದು

ಇಲ್ಲದ ಕಾಮಗಾರಿಗಳ ಹೆಸರಲ್ಲಿ ಹಣ ಪಾವತಿಸಿಕೊಂಡು, ಅಧುನೀಕರಣ ಕಾಮಗಾರಿ ತನಿಖೆ ಹಂತದಲ್ಲಿರುವಾಗಲೇ ಅಧಿಕಾರಿಗಳು ಭಾಗಶಃ ಹಣ ಪಾವತಿಸಿದ್ದಾರೆ. ಮಾಡಲೇಬೇಕಾದ ಅಧುನೀಕರಣ ಕಾಮಗಾರಿ ಕೈಗೆತ್ತಿಕೊಳ್ಳದೆ ಅನಾಥ ಸ್ಥಿತಿಯಲ್ಲಿರುವುದರತ್ತ ಅಧಿಕಾರಿಗಳು ಗಮನ ಹರಿಸದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

‘ಮುಖ್ಯ, ವಿತರಣಾ ಹಾಗೂ ಹೊಲಗಾಲುವೆ ಅಧುನೀಕರಣದ ಹೆಸರಲ್ಲಿ ನಡೆದಿರುವ ಕಳಪೆ, ಕೆಲಸ ಮಾಡದೆ ಹಣ ದುರ್ಬಳಕೆ ಆರೋಪಗಳು ಒಂದಡೆಯಾದರೆ, ಇರುವ ಕಾಮಗಾರಿಗಳ ಸಾಮರ್ಥ್ಯ ಹೆಚ್ಚಿಸಿ, ದುರಸ್ತಿ ಮಾಡದೆ ತಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವ ಬಗ್ಗೆ ತನಿಖೆ ನಡೆಸಬೇಕು’ ಎಂಬುದು ರೈತರ ಸಾಮೂಹಿಕ ಆರೋಪ.

95ನೇ ಕಿ.ಮೀವರೆಗೆ ಬರುವ ಹಳ್ಳ, ನಾಲೆಗಳಿಗೆ ಮುಖ್ಯ ಕಾಲುವೆ ಕೆಳಭಾಗದಲ್ಲಿ ನೀರು ಹರಿದು ಹೋಗಲು ನಿರ್ಮಿಸಿದ ಅಂಡರ್ ಟನಲ್‍, ಪೈಪ್ ಅಕ್ವಾಡೆಕ್ಟ್ ಯಾವೊಂದು ಕಾಮಗಾರಿ ಅಧುನೀಕರಣ ಕಾರ್ಯದಲ್ಲಿ ಕೈಗೆತ್ತಿಕೊಳ್ಳದಿರುವ ಬಗ್ಗೆ ತನಿಖೆ ನಡೆಸಬೇಕು’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಪುತ್ರಗೌಡ ಪಾಟೀಲ ಒತ್ತಾಯಿಸಿದ್ದಾರೆ.

ನಾರಾಯಣಪುರ ಬಲದಂಡೆ ನಾಲೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹಾಲಿಂಗ ಭಜಂತ್ರಿ ಮಾತನಾಡಿ,‘ಅಧುನೀಕರಣ ಕಾಮಗಾರಿಯಲ್ಲಿ ಯಾವುದು ಸೇರ್ಪಡೆ ಮಾಡಿದ್ದಾರೆ. ಯಾವುದು ಮಾಡಿಲ್ಲ ಎನ್ನುವ ಸ್ಪಷ್ಟ ಮಾಹಿತಿ ಇಲ್ಲ. ಹೊಸದಾಗಿ ಬಂದಿದ್ದು ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ನಾರಾಯಣಪುರ ಬಲದಂಡೆ ಮುಖ್ಯನಾಲೆ 18ನೇ ಕಿ.ಮೀನಲ್ಲಿ ನಿರ್ಮಿಸಿದ ಅಕ್ವಾಡೆಕ್ಟ್ ಪರಿವೀಕ್ಷಣಾ ರಸ್ತೆ ಹಾಳಾಗಿದ್ದು ಅಧುನೀಕರಣ ಕಾಮಗಾರಿ ಕಳಪೆಗೆ ಕೈಗನ್ನಡಿಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.