ADVERTISEMENT

ಶಾಲಾ ಬಾಲಕಿಗೆ ಬೇಕಿದೆ ದಾನಿಗಳ ನೆರವು

ರೈಲಿಗೆ ಸಿಲುಕಿ ಕಾಲು ಕಳೆದುಕೊಂಡ ಶಾಲಾ ಬಾಲಕಿ; ಸಂಕಷ್ಟದಲ್ಲಿ ಕುಟುಂಬ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 13:51 IST
Last Updated 24 ಸೆಪ್ಟೆಂಬರ್ 2022, 13:51 IST
ರೈಲು ಅಪಘಾತದಲ್ಲಿ ಗಾಯಗೊಂಡ ದೇವದುರ್ಗ ತಾಲ್ಲೂಕಿನ ಹೇಮನೂರು ಪ್ರೌಢಶಾಲೆ ವಿದ್ಯಾರ್ಥಿನಿ ರೇಣುಕಾ ಹನುಮಂತರಾಯ ಕುಟುಂಬಕ್ಕೆ ಶಾಲಾ ಸಿಬ್ಬಂದಿ ಹಾಗೂ ಸ್ನೇಹ ಬಳಗವು ₹ 22 ಸಾವಿರ ನೆರವು ನೀಡಿತು
ರೈಲು ಅಪಘಾತದಲ್ಲಿ ಗಾಯಗೊಂಡ ದೇವದುರ್ಗ ತಾಲ್ಲೂಕಿನ ಹೇಮನೂರು ಪ್ರೌಢಶಾಲೆ ವಿದ್ಯಾರ್ಥಿನಿ ರೇಣುಕಾ ಹನುಮಂತರಾಯ ಕುಟುಂಬಕ್ಕೆ ಶಾಲಾ ಸಿಬ್ಬಂದಿ ಹಾಗೂ ಸ್ನೇಹ ಬಳಗವು ₹ 22 ಸಾವಿರ ನೆರವು ನೀಡಿತು   

ದೇವದುರ್ಗ: ದೇವರ ದರ್ಶನಕ್ಕೆಂದು ಕುಟುಂಬ ಸದಸ್ಯರ ಜತೆ ತೆರಳುವ ಸಂದರ್ಭದಲ್ಲಿ ಬಾಲಕಿಯೊಬ್ಬಳು ರೈಲಿಗೆ ಸಿಲುಕಿ ಕಾಲುಗಳ ಕಳೆದುಕೊಂಡು ಸಂಕಷ್ಟದಲ್ಲಿ ಕಾಲ ದೂಡುತ್ತಿರುವ ಮನ ಕಲಕುವ ಘಟನೆ ತಾಲ್ಲೂಕಿನ ಹೇಮನೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಗ್ರಾಮದ ಹನುಮಂತರಾಯ ಅವರ ಪುತ್ರಿ ರೇಣುಕಾ (14) ಅವರು ರೈಲಿಗೆ ಸಿಲುಕಿ ಕಾಲು ಕಳೆದುಕೊಂಡ ಬಾಲಕಿ. ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಂಟನೆ ತರಗತಿ ಓದುತ್ತಿದ್ದ ರೇಣುಕಾ ಆ.18 ರಂದು ತಿರುಪತಿಗೆ ತೆರಳುವ ಸಲುವಾಗಿ ಯಾದಗಿರಿ ರೈಲು ನಿಲ್ದಾಣದಲ್ಲಿ ರೈಲು ಹೊರಡುವ ವೇಳೆ ರೈಲು ಹತ್ತುವಾಗ ಈ ದುರ್ಘಟನೆ ನಡೆದಿದ್ದು, ಘಟನೆಯ ನಂತರ ಬಾಲಕಿಯು ನಂತರ ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಒಂದು ಕಾಲಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಮತ್ತೊಂದು ಕಾಲಿಗೆ ಶಸ್ತ್ರ ಚಿಕಿತ್ಸೆ ಆಗಬೇಕಿದೆ. ಒಂದು ಮೊಣಕಾಲುವರೆಗೆ ಹಾನಿಯಾಗಿದ್ದು, ಮತ್ತೊಂದು ಕಾಲು ತೀವ್ರ ಹಾನಿಯಾಗಿದೆ. ಸದ್ಯ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಬಾಲಕಿಯು ಚಿಂತಾಕ್ರಾಂತಳಾಗಿದ್ದಾಳೆ.

ಹಿಂದುಳಿದ ವರ್ಗದ ಸವಿತಾ ಸಮಾಜಕ್ಕೆ ಸೇರಿದ ವಿದ್ಯಾರ್ಥಿನಿಯ ಪಾಲಕರು ತೀವ್ರ ಬಡವರಾಗಿದ್ದು, ಕುಟುಂಬವು ಮಗಳ ಶಸ್ತ್ರಚಿಕಿತ್ಸೆಗಾಗಿ ಆರ್ಥಿಕ ನೆರವಿನ ಅಗತ್ಯವಿದೆ. ಹಾಗಾಗಿ ದಾನಿಗಳು ಬಾಲಕಿಯ ಜೀವ ಉಳಿಸಲು ನೆರವು ನೀಡಬೇಕು ಎಂದು ಹೇಮನೂರು ಪ್ರೌಢಶಾಲೆಯ ಶಿಕ್ಷಕಿ ರೇವಮ್ಮ ಸತೀಶ್ ಮನವಿ ಮಾಡಿದ್ದಾರೆ.

ADVERTISEMENT

‘ಈಗಾಗಲೇ ಸಾಲ ಮಾಡಿ ಒಂದು ಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿದ್ದೇವೆ. ಮತ್ತೊಂದು ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಬೇಕಿದೆ. ಶಸ್ತ್ರಚಿಕಿತ್ಸೆಗೆ ₹ 2 ರಿಂದ 3 ಲಕ್ಷ ವೆಚ್ಚವಾಗಲಿದೆ ಎಂದು ವೈದ್ಯರು ಹೇಳಿದ್ದಾರೆ. ನಮಗೆ ದಿಕ್ಕು ತೋಚದಂತಾಗಿದೆ’ ಎಂದು ಬಾಲಕಿಯ ತಂದೆ ಹನುಮಂತರಾಯ ಅಳಲು ತೋಡಿಕೊಂಡರು.

ನೆರವು ನೀಡಲು ಇಚ್ಛಿಸುವ ದಾನಿಗಳು ಬಾಲಕಿಯ ತಂದೆ ಹನುಮಂತರಾಯಪ್ಪ ಅವರ ಎಸ್‌ಬಿಐ ಬ್ಯಾಂಕ್‌ ಖಾತೆ ಸಂಖ್ಯೆ: 33138517111, ಅಥವಾ ಅವರ ಮೊಬೈಲ್‌ ಸಂಖ್ಯೆ 99021 25096 (ಹನುಮಂತ್ರಾಯ ರಂಗಪ್ಪ)ಗೆ ಪೋನ್ ಪೇ ಮತ್ತು ಗೂಗಲ್ ಪೇ ಮಾಡಬಹುದು ಎಂದು ಪ್ರೌಢಶಾಲೆ ಶಿಕ್ಷಕಿ ರೇವಮ್ಮ ಸತೀಶ್ ಅವರು ಮನವಿ ಮಾಡಿದ್ದಾರೆ.

ನೆರವು ನೀಡಿದ ಗುರು ಸ್ನೇಹ ಬಳಗ

ವಿಷಯ ತಿಳಿದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಹಾಗೂ ಯುವತಿಯ ಸ್ನೇಹ ಬಳಗವು ವಿದ್ಯಾರ್ಥಿನಿಯ ಸಹಾಯಕ್ಕೆ ಧಾವಿಸಿದ್ದು, ಎಲ್ಲರೂ ತಮ್ಮ ಕೈಲಾದ ಹಣ ಸಂಗ್ರಹಿಸಿ ₹ 22 ಸಾವಿರ ಬಾಲಕಿಯ ಕುಟುಂಬಕ್ಕೆ ನೀಡಿ ಮನವೀಯತೆ ಮೆರೆದಿದೆ.

ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರವೀಂದ್ರನಾಥ ಹಿರೇಮಠ ನೇತೃತ್ವದಲ್ಲಿ ಬಾಲಕಿಯ ಮನೆಗೆ ಭೇಟಿ ನೀಡಿ, ಬಾಲಕಿ ಹಾಗೂ ಕುಟುಂಬ ಸದಸ್ಯರಿಗೆ ಧೈರ್ಯ ತುಂಬುವ ಮಾತು ಹೇಳಿ ಬಂದಿದ್ದಾರೆ. ಈ ವೇಳೆ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾವತಿ, ಶಿಕ್ಷಕರಾದ ಬಸವರಾಜ, ಹಾಗೂ ಸಹ ಶಿಕ್ಷಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.