ADVERTISEMENT

‘ಯುವಕರ ಉದ್ಯೋಗಕ್ಕೆ ಹೋರಾಟ ಅನಿವಾರ್ಯ’

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 12:00 IST
Last Updated 18 ನವೆಂಬರ್ 2021, 12:00 IST
ರಾಯಚೂರಿನ ಸರ್ಕಾರಿ ನೌಕರರ ಕಟ್ಟಡದಲ್ಲಿ ಎಐಡಿವೈಒ ಸಂಘಟನೆಯಿಂದ ಆಯೋಜಿಸಲಾಗಿದ್ದ 5ನೇ ಜಿಲ್ಲಾ ಮಟ್ಟದ ಯುವಜನ ಸಮ್ಮೇಳನದಲ್ಲಿ ಸಾಹಿತಿ ವೀರ ಹನುಮಾನ್ ಮಾತನಾಡಿದರು
ರಾಯಚೂರಿನ ಸರ್ಕಾರಿ ನೌಕರರ ಕಟ್ಟಡದಲ್ಲಿ ಎಐಡಿವೈಒ ಸಂಘಟನೆಯಿಂದ ಆಯೋಜಿಸಲಾಗಿದ್ದ 5ನೇ ಜಿಲ್ಲಾ ಮಟ್ಟದ ಯುವಜನ ಸಮ್ಮೇಳನದಲ್ಲಿ ಸಾಹಿತಿ ವೀರ ಹನುಮಾನ್ ಮಾತನಾಡಿದರು   

ರಾಯಚೂರು: ‘ಯುವ ಜನರನ್ನು ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಯುವಜನರನ್ನು ಬಲಿಷ್ಠಗೊಳಿಸುವ ದೃಷ್ಟಿಯಲ್ಲಿ ಸಮ್ಮೇಳನಗಳನ್ನು ಏರ್ಪಡಿಸುತ್ತಿರುವುದು ಸಂತಸದ ವಿಷಯ‘ ಎಂದು ಸಾಹಿತಿ ವೀರ ಹನುಮಾನ್ ಹೇಳಿದರು.

ನಗರದ ಸರ್ಕಾರಿ ನೌಕರರ ಕಟ್ಟಡದಲ್ಲಿ ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಆಯೋಜಿಸಿದ್ದ 5ನೇ ಜಿಲ್ಲಾ ಮಟ್ಟದ ಯುವ ಜನ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಬಡತನ, ನಿರುದ್ಯೋಗ, ಸಮಾನತೆ ಸೇರಿದಂತೆ ಅನೇಕ ಸಾಮಾಜಿಕ ಸಮಸ್ಯೆಗಳಿದ್ದು, ಇಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ಯುವಕರಲ್ಲಿ ಸ್ಪೂರ್ತಿ ತುಂಬಿ ಅವರನ್ನು ಒಟ್ಟುಗೂಡಿಸಿ ಸಮ್ಮೇಳನಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.

ADVERTISEMENT

ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಾಗ ಮಾತ್ರ ಯುವಕರು ಹೋರಾಡಿದ್ದಕ್ಕೆ ಫಲ ಸಿಗುತ್ತದೆ. ದೇಶದ ಜನಸಂಖ್ಯೆಯಲ್ಲಿ ಅತಿ ಹೆಚ್ಚಾಗಿ ಯುವಕರೇ ಇದ್ದು, ಆದರೆ ಯುವಕರಿಗೆ ಉದ್ಯೋಗ ಸಿಗದೇ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಇಂದು ದೇಶದಲ್ಲಿ ಸಾಕಷ್ಟು ಖಾಲಿ ಹುದ್ದೆಗಳಿದ್ದು, ಆದರೆ ಹುದ್ದೆಗಳನ್ನು ಭರ್ತಿ ಮಾಡದೇ ಭಾರಿ ಹಗರಣ ನಡೆದಿದ್ದು, ಈ ಸಮಸ್ಯೆಗೆ ಪರಿಹಾರ ಸಿಗುವವರೆಗೂ ಯುವಕರು ಹೋರಾಟವನ್ನು ಮುಂದುವರೆಸಬೇಕು ಎಂದು ತಿಳಿಸಿದರು.

ಸಂಘಟನೆಯ ರಾಜ್ಯ ಖಜಾಂಚಿ, ವಿಜಯ್ ಕುಮಾರ್, ಜಿಲ್ಲಾಧ್ಯಕ್ಷ ಚನ್ನಬಸವ ಜಾನೆಕಲ್, ಜಿಲ್ಲಾ ಕಾರ್ಯದರ್ಶಿ ಮಲ್ಲನಗೌಡ, ಜಿಲ್ಲಾ ಉಪಾಧ್ಯಕ್ಷ ತಿರುಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.