ADVERTISEMENT

ಹಟ್ಟಿ ಚಿನ್ನದ ಗಣಿ |ಆಧಾರ್ ಕೇಂದ್ರ ಇಲ್ಲದೆ ಜನರ ಪರದಾಟ: ಸಮಸ್ಯೆಗೆ ಸಿಗದ ಸ್ಪಂದನೆ

ಅಮರೇಶ ನಾಯಕ
Published 16 ಡಿಸೆಂಬರ್ 2024, 5:09 IST
Last Updated 16 ಡಿಸೆಂಬರ್ 2024, 5:09 IST
ಹಟ್ಟಿ ಪಟ್ಟಣದ ಅಂಚೆ ಕಚೇರಿ ಎದುರು ಬೆಳಿಗ್ಗೆ ಟೋಕನ್ ಪಡೆಯಲು ಜನರು ಸಾಲುಗಟ್ಟಿ ನಿಂತಿರುವುದು
ಹಟ್ಟಿ ಪಟ್ಟಣದ ಅಂಚೆ ಕಚೇರಿ ಎದುರು ಬೆಳಿಗ್ಗೆ ಟೋಕನ್ ಪಡೆಯಲು ಜನರು ಸಾಲುಗಟ್ಟಿ ನಿಂತಿರುವುದು   

ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣದಲ್ಲಿ ಆಧಾರ್‌ ಕೇಂದ್ರ ಇಲ್ಲದೆ ಜನರು ಊರೂರು ಅಲೆದಾಡುವ ಪರಿಸ್ಧಿತಿ ಎದುರಾಗಿದೆ.

ಸುತ್ತಮುತ್ತಲಿನ ಗ್ರಾಮಗಳಾದ ಕೋಠಾ ಮೇದಿನಾಪೂರ, ಗುರುಗುಂಟಾ, ರೋಡಲಬಂಡ ತವಗ, ಕಡ್ಡೋಣಿ, ಆನ್ವರಿ, ನಿಲೋಗಲ್, ವೀರಾಪೂರ, ಪೈದೊಡ್ಡಿ, ಬಂಡೆಭಾವಿ, ಮಾಚನೂರು, ಗೌಡೂರು, ಯಲಗಟ್ಟಾದ ಜನ ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸ, ಜನ್ಮದಿನಾಂಕ ತಿದ್ದುಪಡಿ ಮಾಡಲು ಪರದಾಡುವಂತಾಗಿದೆ.

ಹಟ್ಟಿ ಪಟ್ಟಣದ ಅಂಚೆ ಕಚೇರಿಯಲ್ಲಿ ಸಿಬ್ಬಂದಿ ತಮ್ಮ ದೈನಂದಿನ ಕೆಲಸದ ಜೊತೆಗೆ ಆಧಾರ್ ಕಾರ್ಡ್‌ ತಿದ್ದುಪಡಿ ಮಾಡುತ್ತಿದ್ದಾರೆ. ಜನ ಪಾಳಿಯಲ್ಲಿ ನಿಂತು ಚೀಟಿ ಪಡೆಯಬೇಕು. ಅಂದಾಗ ಮಾತ್ರ ತಿದ್ದುಪಡಿ ಮಾಡಲು ಅವಕಾಶ ಸಿಗುತ್ತದೆ. ಇಲ್ಲವಾದರೆ ಸಂಜೆವರೆಗೂ ನಿಂತರೂ ಕೆಲವೊಮ್ಮೆ ಕೆಲಸ ಆಗುವುದಿಲ್ಲ. ನಮ್ಮ ಗೋಳನ್ನು ಕೆಳುವವರೇ ಇಲ್ಲದಂತಾಗಿದೆ ಎನ್ನುತ್ತಾರೆ ಜನರು.

ADVERTISEMENT

ಆಧಾರ್ ಕಾರ್ಡ್‌ ತಿದ್ದುಪಡಿಗಾಗಿ ನಿತ್ಯ 15 ಕಿ.ಮೀ ದೂರದಿಂದ ಬರಬೇಕು. ಅಧಿಕಾರಿ ಹಾಗೂ ಜನಪ್ರತಿನಿಗಳ ನಿರ್ಲಕ್ಷ್ಯದಿಂದ ಜನರು ಆಧಾರ್‌ ಕೇಂದ್ರ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಹಟ್ಟಿ ಪಟ್ಟಣದಲ್ಲಿ ಕರ್ನಾಟಕ ಒನ್ ಕೇಂದ್ರವಿದ್ದು ಅದು ಕೂಡ ಬೀಗ ಹಾಕಲಾಗಿದೆ. ಜನನ, ಮರಣ, ಶಾಲಾ ದಾಖಲಾತಿ, ಬ್ಯಾಂಕಿನ ವ್ಯವಹಾರ, ಸರ್ಕಾರಿ ಸೇವೆ ಪಡೆಯಲು ಆಧಾರ್ ಕಾರ್ಡ್‌ ಪ್ರಮುಖವಾಗಿದ್ದು, ತಿದ್ದುಪಡಿ ಕೇಂದ್ರ ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ ಎಂಬುದು ಸಾರ್ವಜನಿಕರ ಅಳಲು.

ಈ ಬಗ್ಗೆ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ಗಮನಕ್ಕೆ ತಂದರೂ ಅಧಿಕಾರಿಗಳು ಜನರ ಸಮಸ್ಯೆಗೆ ಕಿವಿಗೊಡುತ್ತಿಲ್ಲ. ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಜನರ ಸಮಸ್ಯೆಯನ್ನು ಬಗೆಹರಿಸಬೇಕು ಎನ್ನುವುದು ಜನರ ಆಗ್ರಹವಾಗಿದೆ.

ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಜನರು ನಿತ್ಯ ಅಲೆಯುವುದು ಸಾಮಾನ್ಯವಾಗಿದೆ. ಜನರ ಸಮಸ್ಯಗೆ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಪಂದಿಸಲಿ
ಶಿವರಾಜ ಕಂದಗಲ್ ಸಮಾಜ ಸೇವಕ ಹಟ್ಟಿ
ಆಧಾರ್‌ ಕೇಂದ್ರಗಳು ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ಹಲವು ಸಮಸ್ಯೆಯಿಂದ ಕೆಲವು ಕಡೆ ಈಗಾಗಲೇ ಬಂದ್‌ ಮಾಡಲಾಗಿದೆ. ಜನರಿಂದ ದೂರುಗಳು ಬಂದಿವೆ. ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು
ಶಂಶಾಲಂ ತಹಶೀಲ್ದಾರ್‌ ಲಿಂಗಸುಗೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.