ADVERTISEMENT

26 ರಂದು ಕರೆಗುಡ್ಡದಲ್ಲಿ ಟಿಎಲ್‌ಬಿಸಿ ಕಾರ್ಮಿಕರಿಂದ ಗ್ರಾಮವಾಸ್ಯವ್ಯ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 15:53 IST
Last Updated 21 ಜೂನ್ 2019, 15:53 IST
ಆರ್.ಮಾನಸಯ್ಯ
ಆರ್.ಮಾನಸಯ್ಯ   

ರಾಯಚೂರು:ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜೂನ್‌ 26 ರಂದು ಮಾನ್ವಿ ತಾಲ್ಲೂಕಿನ ಕರೆಗುಡ್ಡ ಗ್ರಾಮಕ್ಕೆ ಗ್ರಾಮವಾಸ್ತವ್ಯಕ್ಕೆ ಬರುತ್ತಿರುವುದು ಸಂತೋಷದ ಸಂಗತಿಯಾಗಿದ್ದು, ತುಂಗಾಭದ್ರಾ ಎಡದಂಡೆ ಕಾಲುವೆ ಹಂಗಾಮಿ ಕಾರ್ಮಿಕರ (ಟಿಎಲ್‌ಬಿಸಿ) ವೇತನ ಬಾಕಿ ಕೊಡಿಸುವ ವಿಚಾರವಾಗಿ ಸಮಸ್ಯೆಯನ್ನು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಲಾಗುವುದು. ಇದಕ್ಕಾಗಿ 26 ರಂದು ಕರೆಗುಡ್ಡದಲ್ಲಿ ಕಾರ್ಮಿಕರೆಲ್ಲ ಗ್ರಾಮವಾಸ್ತವ್ಯ ಮಾಡಲು ನಿರ್ಧರಿಸಿದ್ದಾರೆ ಎಂದು ಟಿಎಲ್‌ಬಿಸಿ ಹಂಗಾಮಿ ಕಾರ್ಮಿಕರ ಸಂಘದ ಅಧ್ಯಕ್ಷ ಆರ್‌. ಮಾನಸಯ್ಯ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ವಿಚಾರವಾಗಿ ಜೂನ್‌ 28 ರಂದು ಬೆಂಗಳೂರಿನಲ್ಲಿ ಸಚಿವ ಡಿ.ಕೆ. ಶಿವಕುಮಾರ್‌ ಅವರ ಮನೆ ಎದುರು ಕಾರ್ಮಿಕರು ಧರಣಿ ನಡೆಸಲು ತೆರಳಲಿದ್ದಾರೆ. ಅದಕ್ಕಿಂತ ಪೂರ್ವದಲ್ಲಿ 26 ರಂದು ಮುಖ್ಯಮಂತ್ರಿಗಳು ಸಮಸ್ಯೆ ಪರಿಹರಿಸುವ ವಿಶ್ವಾಸವಿದೆ. ಆನಂತರ, ಬೆಂಗಳೂರಿಗೆ ಅನಗತ್ಯ ಹೋಗುವ ಪ್ರಮೇಯ ಉದ್ಭವಿಸುವುದಿಲ್ಲ. ಕಾರ್ಮಿಕರ ಸಮಸ್ಯೆ ಪರಿಹರಿಸಿದರೆ ಸಿಎಂ ಅವರನ್ನು ಸನ್ಮಾನಿಸಿ ಬರಲಾಗುವುದು ಎಂದು ತಿಳಿಸಿದರು.

ಈ ಭಾಗದ ಜನರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೆ ಪರಿಹಾರ ನೀಡುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ. ಟಿಎಲ್‌ಬಿಸಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿ, ಬಾಕಿ ವೇತನ ಕೊಡಿಸುವ ಯೋಜನೆ ರೂಪಿಸಿದರೆ ಸಿಎಂ ಗ್ರಾಮವಾಸ್ತವ್ಯದ ಉದ್ದೇಶ ಸಾರ್ಥಕತೆಯಾಗುತ್ತದೆ ಎಂದು ಹೇಳಿದರು.

ADVERTISEMENT

ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವುದು ಇದೇ ಮೊದಲನೇ ಬಾರಿಯಲ್ಲ. ಕಳೆದ ವರ್ಷ 73 ದಿನಗಳವರೆಗೆ ಪ್ರತಿಭಟನೆ ನಡೆಸಲಾಯಿತು. ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರು ಧರಣಿ ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಹಾಗೂ ಜಿಲ್ಲೆಯ ಶಾಸಕರೆಲ್ಲ ಅವರೊಂದಿಗೆ ಇದ್ದರು. ಭರವಸೆ ಕೊಟ್ಟು 14 ತಿಂಗಳಾದರೂ ವೇತನ ಪಾವತಿ ಮಾಡುತ್ತಿಲ್ಲ ಎಂದು ತಿಳಿಸಿದರು.

ಕನಿಷ್ಠ ವೇತನವೂ ಸಿಗದೆ ಕಾರ್ಮಿಕರು ಸಾಲ ಮಾಡಿಕೊಂಡು ಬದುಕುತ್ತಿದ್ದಾರೆ. ಕಾರ್ಮಿಕರ ಕುಟುಂಬಗಳು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅತಂತ್ರ ಸ್ಥಿತಿಗೆ ತಲುಪಿರುವ ಕಾರ್ಮಿಕರು ಜೂನ್‌ 28 ರಂದು ಸಚಿವ ಡಿ.ಕೆ. ಶಿವಕುಮಾರ್‌ ಮನೆ ಎದುರು ಧರಣಿ ಕುಳಿತುಕೊಳ್ಳಲಿದ್ದಾರೆ. ಅದಕ್ಕೂ ಪೂರ್ವ ಮುಖ್ಯಮಂತ್ರಿಯನ್ನು ಭೇಟಿ ಮಾಡಲಾಗುವುದು ಎಂದು ಹೇಳಿದರು.

ಬಸನಗೌಡ ಕಲ್ಲೂರ, ಈರಣ್ಣ, ಅಡವಿರಾವ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.